2015ರ ಮಾದಕ ದ್ರವ್ಯ ಪ್ರಕರಣ; ಕಾಂಗ್ರೆಸ್ ಶಾಸಕ ಸುಖ್ಪಾಲ್ ಸಿಂಗ್ ಖೈರಾ ಬಂಧನ
ಸುಖ್ಪಾಲ್ ಸಿಂಗ್ ಖೈರಾ| Photo: ANI
ಚಂಡಿಗಢ: 2015ರ ಮಾದಕದ್ರವ್ಯ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಶಾಸಕ ಸುಖ್ಪಾಲ್ ಸಿಂಗ್ ಖೈರಾ ಅವರನ್ನು ಪಂಜಾಬ್ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಖೈರಾ ಅವರನ್ನು ಚಂಡಿಗಢದಲ್ಲಿರುವ ಅವರ ನಿವಾಸದಿಂದ ಪೊಲೀಸ್ ಅಧೀಕ್ಷಕ ಮಂಜೀತ್ ಸಿಂಗ್ ನೇತೃತ್ವದ ತಂಡ ಬೆಳಗ್ಗೆ ಸುಮಾರು 6.30ಕ್ಕೆ ಬಂಧಿಸಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ಸಂದರ್ಭ ಖೇರಾ ಫೇಸ್ಬುಕ್ ಲೈವ್ನಲ್ಲಿ ಪೊಲೀಸರ ಕ್ರಮವನ್ನು ಪ್ರಶ್ನಿಸಿದ್ದಾರೆ. ರಾಜಕೀಯ ದ್ವೇಷ ಸಾಧನೆಗೆ ತನ್ನನ್ನು ಬಂಧಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ತನ್ನನ್ನು ಸುಳ್ಳು ಪ್ರಕರಣದಲ್ಲಿ ಬಂಧಿಸಲಾಗುತ್ತಿದೆ. ರಾಜ್ಯದಲ್ಲಿ ‘ಜಂಗಲ್ ರಾಜ್ಯ’ ಅಸ್ತಿತ್ವದಲ್ಲಿ ಇದೆ ಎಂದು ಹೇಳಿದ್ದಾರೆ.
ಅಲ್ಲದೆ, ಪೊಲೀಸ್ ತಂಡದೊಂದಿಗೆ ವಾಗ್ವಾದಕ್ಕೆ ಕೂಡ ಇಳಿದಿದ್ದಾರೆ. ಬಂದನ ವಾರಂಟ್ ತೋರಿಸುವಂತೆ ಆಗ್ರಹಿಸಿದ್ದಾರೆ. ಆಗ ಪೊಲೀಸ್ ಅಧಿಕಾರಿಯೊಬ್ಬರು, ‘ನಿಮ್ಮನ್ನು ಎನ್ಡಿಪಿಎಸ್ ಕಾಯ್ದೆ ಅಡಿಯಲ್ಲಿ ಬಂಧಿಸಲಾಗುತ್ತಿದ್ದು, ಫಾಝಿಲ್ಕಾದ ಜಲಾದಾಬಾದ್ಗೆ ಕರೆದೊಯ್ಯಲಾಗುವುದು’’ ಎಂದು ಅವರಿಗೆ ತಿಳಿಸಿದ್ದಾರೆ. ಆಗ ಖೈರಾ ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ ಎಂದು ಪ್ರತಿಪಾದಿಸಿದರು.
2015ರ ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಉಪ ಮಹಾನಿರೀಕ್ಷಕ ಸ್ಪಪನ್ ಶರ್ಮಾ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ಎಪ್ರಿಲ್ 2023ರಲ್ಲಿ ರಚಿಸಲಾಗಿತ್ತು. ಇದರ ತನಿಖೆಯ ಆಧಾರದಲ್ಲಿ ಖೈರಾ ಅವರನ್ನು ಬಂಧಿಸಲಾಗಿದೆ.