2019 ಬಾಲಾಕೋಟ್ ವಾಯು ದಾಳಿ: ಜಗತ್ತಿಗೆ ತಿಳಿಸುವ ಮುನ್ನ ಪಾಕ್ಗೆ ಮಾಹಿತಿ ನೀಡಲಾಗಿತ್ತು ಎಂದ ಪ್ರಧಾನಿ ಮೋದಿ
ನರೇಂದ್ರ ಮೋದಿ | PC : PTI
ಹೊಸದಿಲ್ಲಿ: ಜಗತ್ತಿಗೆ ತಿಳಿಸುವ ಮುನ್ನ 2019 ಬಾಲಾಕೋಟ್ ದಾಳಿಗಳ ಬಗ್ಗೆ ಪಾಕಿಸ್ತಾನಕ್ಕೆ ತಾನು ಮಾಹಿತಿ ನೀಡಿದ್ದಾಗಿ ಕರ್ನಾಟಕದ ಬಾಗಲಕೋಟೆಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
“ಮೋದಿ ಬೆನ್ನ ಹಿಂದೆ ದಾಳಿ ನಡೆಸುವುದರಲ್ಲಿ ನಂಬಿಕೆಯಿರಿಸಿಲ್ಲ, ಬದಲಿಗೆ ನೇರಾನೇರ ಹೋರಾಡುತ್ತಾನೆ.” ಎಂದು ಪ್ರಧಾನಿ ಹೇಳಿದರು.
“ನಾನು ಸೇನಾ ಪಡೆಗಳಿಗೆ ಮಾಧ್ಯಮಗಳನ್ನು ಕರೆಸಿ ತಿಳಿಸುವಂತೆ ತಿಳಿಸಿದ್ದೆ, ಆದರೆ ಮೊದಲು ವಾಯು ದಾಳಿಗಳ ಬಗ್ಗೆ ಹಾಗೂ ಅದರಿಂದ ಉಂಟಾದ ವಿನಾಶದ ಕುರಿತು ಪಾಕಿಸ್ತಾನಕ್ಕೆ ದೂರವಾಣಿ ಮೂಲಕ ತಿಳಿಸುವುದಾಗಿ ಹೇಳಿದೆ. ಆದರೆ ಪಾಕಿಸ್ತಾನದ ಜನರು ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ. ನಮ್ಮ ಸೇನಾಪಡೆಗಳಿಗೆ ಕಾಯಲು ತಿಳಿಸಿ, ನಂತರ ಪಾಕಿಸ್ತಾನಕ್ಕೆ ಮಾಹಿತಿ ನೀಡಿದ ನಂತರ ಹಿಂದಿನ ರಾತ್ರಿ ನಡೆದ ವಾಯುದಾಳಿ ಕುರಿತು ಜಗತ್ತಿಗೆ ತಿಳಿಸಲಾಯಿತು,” ಎಂದು ಪ್ರಧಾನಿ ಹೇಳಿದ್ದಾರೆ.
“ಮೋದಿ ಏನನ್ನೂ ಮರೆಮಾಚುವುದಿಲ್ಲ, ಹಿಂದಿನಿಂದ ದಾಳಿ ನಡೆಸುವುದಿಲ್ಲ, ಬದಲು ಬಹಿರಂಗವಾಗಿ ನಡೆಸುತ್ತಾನೆ,” ಎಂದು ಅವರು ಹೇಳಿಕೊಂಡರು.
ಬಾಲಾಕೋಟ್ ದಾಳಿಗಳ ಬಗ್ಗೆ ತಿಳಿಸಿದಾಗ ಹಲವರಿಗೆ ಅದು ಕರ್ನಾಟಕದ ಬಾಗಲಕೋಟೆ ಎಂದು ಆರಂಭದಲ್ಲಿ ತಿಳಿದುಕೊಂಡರು ಎಂದು ಮೋದಿ ಹೇಳಿದರು.