2024: NDA ಮತ್ತು INDIA ನಡುವೆ ನಿರ್ಣಾಯಕ ಚುನಾವಣಾ ವರ್ಷ
Photo: PTI
ಹೊಸದಿಲ್ಲಿ: ನಾವೆಲ್ಲ ಸಂಸತ್ ಚುನಾವಣಾ ವರ್ಷಕ್ಕೆ ಪ್ರವೇಶಿಸಲು ಸಿದ್ಧವಾಗುತ್ತಿರುವಂತೆಯೆ, ಸುಲಭವಾಗಿ ಸತತ ಮೂರನೆಯ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಸಕಲ ಸನ್ನದ್ಧವಾಗಿದೆ. ಅದು ಚುನಾವಣಾ ಊಹೆಯನ್ನು ತಡೆಯಲು ರೂಪುಗೊಂಡಿರುವ 28 ವಿರೋಧ ಪಕ್ಷಗಳ ಮೈತ್ರಿಕೂಟವಾದ INDIA ಅನ್ನು ಎದುರಿಸಲಿದೆ.
ಈ ಹಿನ್ನೆಲೆಯಲ್ಲಿ ಲೋಕಸಭೆ, ರಾಜ್ಯ ಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಹಾಗೂ ಇಂಡಿಯಾ ಮೈತ್ರಿಕೂಟಗಳು ಎಲ್ಲಿವೆ ಎಂಬುದರ ಪಕ್ಷಿನೋಟ ಇಲ್ಲಿದೆ:
ಲೋಕಸಭೆ
2014ರ ಚುನಾವಣೆಯಲ್ಲಿ 282 ಸೀಟುಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಯು, 2019ರ ಚುನಾವಣೆಯಲ್ಲಿ ತಾನೊಂದೇ 303 ಸೀಟುಗಳಲ್ಲಿ ಜಯಭೇರಿ ಬಾರಿಸಿತ್ತು. ಇದಕ್ಕೂ ಮುನ್ನ, ಹಿಂದಿ ರಾಜ್ಯಗಳಲ್ಲಿ ಭಾರಿ ಗೆಲುವು ಸಾಧಿಸಿದ್ದ ಬಿಜೆಪಿಯು, ಈಶಾನ್ಯ ರಾಜ್ಯಗಳಲ್ಲಿ ಸಾಕಷ್ಟು ಸೀಟುಗಳು ಹಾಗೂ ದಕ್ಷಿಣ ಭಾರತದಲ್ಲಿ ಕರ್ನಾಟಕಕ್ಕೆ ಮಾತ್ರ ಸೀಮಿತಗೊಂಡಿತ್ತು. ಈ ನಡುವೆ ಕಾಂಗ್ರೆಸ್ ಪಕ್ಷವು ಕೇವಲ 52 ಸೀಟುಗಳಲ್ಲಿ ಜಯ ಸಾಧಿಸಿತ್ತು.
2019ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ 332 ಸಂಸದರನ್ನು ಗೆಲ್ಲಿಸಿಕೊಂಡರೆ, ಹಾಲಿ 28 ಮಿತ್ರಪಕ್ಷಗಳನ್ನು ಹೊಂದಿರುವ ಇಂಡಿಯಾ ಮೈತ್ರಿಕೂಟವು 144 ಸೀಟುಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, 2019ರಿಂದ ಪ್ರಮುಖ ಪ್ರಾದೇಶಿಕ ಪಕ್ಷಗಳಾದ ಎಐಎಡಿಎಂಕೆ, ಜೆಡಿ(ಯು) ಹಾಗೂ ಅಕಾಲಿದಳ ಎನ್ಡಿಎ ಮೈತ್ರಿಕೂಟದಿಂದ ಹೊರಹೋಗಿರುವುದರಿಂದ ಅದರ ಸಮ್ಮಿಶ್ರಣದಲ್ಲಿ ಭಾರಿ ಪ್ರಮಾಣದಲ್ಲಿ ಬದಲಾವಣೆಯಾಗಿದೆ.
543 ಸದಸ್ಯ ಬಲದ ಈಗಿನ ಲೋಕಸಭೆಯಲ್ಲಿ ಮೈತ್ರಿಕೂಟಗಳ ಲೆಕ್ಕಾಚಾರದಲ್ಲಿ ಎನ್ಡಿಎ ಮೈತ್ರಿಕೂಟದಲ್ಲಿ 319 ಸಂಸದರಿದ್ದು, ಕೇವಲ 139 ಸಂಸದರನ್ನು ಹೊಂದಿರುವ ಇಂಡಿಯಾ ಮೈತ್ರಿಕೂಟಕ್ಕಿಂತ ಭಾರಿ ಮುನ್ನಡೆಯಲ್ಲಿದೆ. ಎನ್ಡಿಎ ಮೈತ್ರಿಕೂಟದ ಪಾಲುದಾರ ಪಕ್ಷಗಳು 2019ರ ಚುನಾವಣೆಯಲ್ಲಿ ಒಟ್ಟಾರೆಯಾಗಿ ಶೇ. 40 ಮತಗಳನ್ನು ಪಡೆದಿದ್ದರೆ, ಇಂಡಿಯಾ ಮೈತ್ರಿಕೂಟದ ಪಾಲುದಾರ ಪಕ್ಷಗಳು ಶೇ. 35ರಷ್ಟು ಮತಗಳನ್ನು ಪಡೆದಿದ್ದವು.
ಸದ್ಯ ಎನ್ಡಿಎ ಮೈತ್ರಿಕೂಟದಲ್ಲಿ ಬಿಜೆಪಿಯು 290 ಸಂಸದರನ್ನು ಹೊಂದಿದ್ದು, ಕನಿಷ್ಠ ಪಕ್ಷ 12 ಮಂದಿ ಸಂಸದರು ಇತ್ತೀಚಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ಸ್ಥಾನವನ್ನು ತೊರೆದಿದ್ದಾರೆ. ಎನ್ಡಿಎಯ ಪ್ರಮುಖ ಪಾಲುದಾರ ಪಕ್ಷವಾದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆಯು 13 ಸಂಸದರನ್ನು ಹೊಂದಿದೆ.
ಮತ್ತೊಂದೆಡೆ, INDIA ಮೈತ್ರಿಕೂಟದ ಸಂಸದರು ಹಲವಾರು ಪಕ್ಷಗಳಲ್ಲಿ ಹಂಚಿ ಹೋಗಿದ್ದಾರೆ. 48 ಸಂಸದರೊಂದಿಗೆ ಕಾಂಗ್ರೆಸ್ ಪಕ್ಷವು ಈಗಲೂ ಈ ಮೈತ್ರಿಕೂಟದ ಅತಿ ದೊಡ್ಡ ಪಕ್ಷವಾಗಿದ್ದು, ಪ್ರಮುಖ ಪ್ರಾದೇಶಿಕ ಪಕ್ಷಗಳಾದ ಡಿಎಂಕೆ (24 ಸಂಸದರು), ತೃಣಮೂಲ ಕಾಂಗ್ರೆಸ್ (22 ಸಂಸದರು) ಹಾಗೂ ಜೆಡಿಯು (16 ಸಂಸದರು) ಈ ಮೈತ್ರಿಕೂಟದಲ್ಲಿ ಗಮನಾರ್ಹ ಉಪಸ್ಥಿತಿಯನ್ನು ಹೊಂದಿವೆ.
ದಕ್ಷಿಣ ಭಾರತ ಹೊರತುಪಡಿಸಿ ಎನ್ಡಿಎ ಮೈತ್ರಿಕೂಟದ ಪಕ್ಷಗಳು ದೇಶಾದ್ಯಂತ ಹರಡಿಕೊಂಡಿವೆ. ಇಂಡಿಯಾ ಮೈತ್ರಿಕೂಟವು ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಹಾಗೂ ಬಿಹಾರಗಳಲ್ಲಿ ತನ್ನ ಬಾಹುಳ್ಯವನ್ನು ಹೊಂದಿದೆ.
ರಾಜ್ಯ ಸಭೆ
ರಾಜ್ಯಸಭೆಯಲ್ಲೂ ಕೂಡಾ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೇ ತಮ್ಮ ಮೈತ್ರಿಕೂಟಗಳ ಪರವಾಗಿ ಅತಿ ಹೆಚ್ಚು ಸಂಸದರನ್ನು ಹೊಂದಿದ್ದು, ಬಿಜೆಪಿಯು 93 ಸಂಸದರನ್ನು ಹೊಂದಿದ್ದರೆ, ಕಾಂಗ್ರೆಸ್ 30 ಸಂಸದರನ್ನು ಹೊಂದಿದೆ.
ಆದರೆ, 238 ಸದಸ್ಯ ಬಲದ ರಾಜ್ಯಸಭೆಯಲ್ಲಿ ಎರಡೂ ಮೈತ್ರಿಕೂಟಗಳ ಒಟ್ಟಾರೆ ಬಲವು ಬಹುತೇಕ ಸಮವಾಗಿದೆ. ಎನ್ಡಿಎ ಮೈತ್ರಿಕೂಟವು 104 ಸಂಸದರನ್ನು ಹೊಂದಿದ್ದರೆ, ಇಂಡಿಯಾ ಮೈತ್ರಿಕೂಟವು 94 ಸಂಸದರನ್ನು ಹೊಂದಿದೆ.
ಈ ನಡುವೆ, ರಾಜ್ಯಸಭೆಯಲ್ಲಿ ಬಿಜೆಪಿಯ ಅತಿ ದೊಡ್ಡ ಮಿತ್ರ ಪಕ್ಷ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಆಗಿದ್ದು, ಆ ಪಕ್ಷದ ಮೂವರು ಸಂಸದರಿದ್ದಾರೆ. ಇದೇ ರೀತಿ ಕಾಂಗ್ರೆಸ್ ನಂತರ ಟಿಎಂಸಿಯ 13 ಸಂಸದರು, ಆಪ್ ಮತ್ತು ಡಿಎಂಕೆಯ ತಲಾ 10 ಸಂಸದರು ಇಂಡಿಯಾ ಮೈತ್ರಿಕೂಟದಿಂದ ಇದ್ದಾರೆ.
2023ರಲ್ಲಿ 10 ನೂತನ ರಾಜ್ಯಸಭಾ ಸದಸ್ಯರು ಆಯ್ಕೆಯಾಗಿದ್ದು, ಈ ಪೈಕಿ ಬಿಜೆಪಿ ಹಾಗೂ ಟಿಎಂಸಿಯಿಂದ ತಲಾ 5 ಮಂದಿ ಆಯ್ಕೆಯಾಗಿದ್ದಾರೆ. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಇನ್ನೂ 65 ಮಂದಿ ರಾಜ್ಯಸಭಾ ಸದಸ್ಯರು ಆಯ್ಕೆಯಾಗಲಿದ್ದಾರೆ. ಚುನಾವಣೆ ನಡೆಯಬೇಕಿರುವ ಈ 65 ಸೀಟುಗಳ ಪೈಕಿ, ಬಿಜೆಪಿ 29 ಸಂಸದರು, ಕಾಂಗ್ರೆಸ್ 11, ಟಿಎಂಸಿ 4 ಸಂಸದರು, ಆಪ್, ಎಸ್ಪಿ ಹಾಗೂ ಬಿಎಸ್ಆರ್ ಪಕ್ಷಗಳ ತಲಾ ಮೂರು ಸಂಸದರು ಹಾಗೂ ಬಿಜೆಡಿ, ಜೆಡಿ(ಯು) ಮತ್ತು ಆರ್ಜೆಡಿಯ ತಲಾ ಇಬ್ಬರು ಸಂಸದರಿದ್ದಾರೆ.
ರಾಜ್ಯ ವಿಧಾನಸಭೆಗಳು
ಈ ವರ್ಷ ಒಂಭತ್ತು ರಾಜ್ಯಗಳಿಗೆ ಚುನಾವಣೆ ನಡೆದಿದ್ದು, ಐದು ರಾಜ್ಯಗಳಲ್ಲಿ ಅಧಿಕಾರ ಬದಲಾವಣೆಯಾಗಿದೆ. ಈ ಪೈಕಿ ಬಿಜೆಪಿ 4 ರಾಜ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ಎರಡು ರಾಜ್ಯಗಳಲ್ಲಿ ಹಾಗೂ ಉಳಿದ ಮೂರು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಗೆಲುವು ಸಾಧಿಸಿವೆ.
ಮಧ್ಯಪ್ರದೇಶದಲ್ಲಿ ಭಾರಿ ಗೆಲುವು ಹಾಗೂ ರಾಜಸ್ಥಾನ ಮತ್ತು ಛತ್ತೀಸ್ ಗಢ ರಾಜ್ಯಗಳನ್ನು ತನ್ನೆಡೆಗೆ ವಾಲಿಸಿಕೊಂಡಿದ್ದರಿಂದ ರಾಷ್ಟ್ರಮಟ್ಟದಲ್ಲಿ ಎನ್ಡಿಎ ಸದಸ್ಯ ಪಕ್ಷಗಳು ಒಟ್ಟು 18 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಂತಾಗಿದೆ. ಇದಕ್ಕೆ ಪ್ರತಿಯಾಗಿ ಇಂಡಿಯಾ ಮೈತ್ರಿಕೂಟದ ಸದಸ್ಯ ಪಕ್ಷಗಳು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಧಿಕಾರ ಹೊಂದಿವೆ. ಇನ್ನು ವೈಎಸ್ಆರ್ಸಿಪಿ ಮತ್ತು ಬಿಜೆಡಿ ಪಕ್ಷಗಳು ಅಧಿಕೃತವಾಗಿ ಎನ್ಡಿಎ ಅಥವಾ ಇಂಡಿಯಾ ಮೈತ್ರಿಕೂಟದ ಭಾಗವಾಗಿ ಘೋಷಿಸಿಕೊಂಡಿಲ್ಲ. ಇವೆರಡೂ ಪಕ್ಷಗಳು ಕ್ರಮವಾಗಿ ಆಂಧ್ರ ಪ್ರದೇಶ ಹಾಗೂ ಒಡಿಶಾದಲ್ಲಿ ಅಧಿಕಾರದಲ್ಲಿವೆ.
ರಾಜ್ಯಗಳಲ್ಲಿನ ಶಾಸಕರ ಬಲಾಬಲ
ಇಡೀ ದೇಶದಲ್ಲಿನ ರಾಜ್ಯ ವಿಧಾನಸಭೆಗಳ ಪೈಕಿ ಒಟ್ಟು 4,123 ಶಾಸಕರಿದ್ದು, ಈ ಪೈಕಿ ಇಂಡಿಯಾ ಮೈತ್ರಿಕೂಟದ ಬಳಿ 1,653 ಶಾಸಕರಿದ್ದರೆ, ಎನ್ಡಿಎ ಮೈತ್ರಿಕೂಟದ ಬಳಿ 1,791 ಶಾಸಕರಿದ್ದಾರೆ. ಆರು ರಾಜ್ಯಗಳಲ್ಲಿ ವಿಧಾನ ಪರಿಷತ್ ಗಳಿದ್ದು, 426 ವಿಧಾನ ಪರಿಷತ್ ಸದಸ್ಯರಿದ್ದಾರೆ. ಈ ಪೈಕಿ ಇಂಡಿಯಾ ಮೈತ್ರಿಕೂಟದ ಬಳಿ 105 ವಿಧಾನ ಪರಿಷತ್ ಸದಸ್ಯರಿದ್ದರೆ, ಎನ್ಡಿಎ ಬಳಿ 184 ವಿಧಾನ ಪರಿಷತ್ ಸದಸ್ಯರಿದ್ದಾರೆ.
ಶಾಸಕರ ಲೆಕ್ಕದಲ್ಲಿ ಇಂಡಿಯಾ ಮೈತ್ರಿಕೂಟವು ಪಶ್ಚಿಮ ಬಂಗಾಳ, ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ಪಂಜಾಬ್ ನಲ್ಲಿ ದೊಡ್ಡ ಪ್ರಮಾಣದ ಅಸ್ತಿತ್ವವನ್ನು ಹೊಂದಿದೆ. ಇದೇ ವೇಳೆ ಎನ್ಡಿಎ ಮೈತ್ರಿಕೂಟವು ಭಾರಿ ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ ಹಾಗೂ ಮಹಾರಾಷ್ಟ್ರದಲ್ಲಿ ತನ್ನ ಬಾಹುಳ್ಯ ಹೊಂದಿದೆ.
2024ರಲ್ಲಿ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಹಾಗೂ ಸಿಕ್ಕಿಂ ರಾಜ್ಯಗಳಲ್ಲಿ ಲೋಕಸಭಾ ಚುನಾವಣೆಯೊಂದಿಗೆ ವಿಧಾನಸಭಾ ಚುನಾವಣೆಯೂ ನಡೆಯಲಿದೆ. ವರ್ಷದ ಕೊನೆಗೆ ಹರ್ಯಾಣ, ಮಹಾರಾಷ್ಟ್ರ ಹಾಗೂ ಝಾರ್ಖಂಡ್ ನಲ್ಲಿ ಚುನಾವಣೆಗಳು ನಡೆಯಲಿವೆ.
ಆಂಧ್ರ ಪ್ರದೇಶದಲ್ಲಿ ಯಾವುದೇ ಮೈತ್ರಿಕೂಟದ ಶಾಸಕರು ಇಲ್ಲ. ಬದಲಿಗೆ ಇಲ್ಲಿ ಆಡಳಿತಾರೂಢ ವೈಎಸ್ಆರ್ಸಿಪಿ ಮತ್ತು ತೆಲುಗು ದೇಶಂ ಪಕ್ಷಗಳು ಹಿಡಿತ ಹೊಂದಿವೆ. ಒಡಿಶಾದಲ್ಲೂ ಕೂಡಾ ಎನ್ಡಿಎ ಮತ್ತು ಇಂಡಿಯಾ ಮೈತ್ರಿಕೂಟಗಳು ಅತ್ಯಲ್ಪ ಅಸ್ತಿತ್ವವನ್ನು ಹೊಂದಿದ್ದು, ಬಿಜೆಡಿ ಇಲ್ಲಿ ಅಧಿಕಾರದಲ್ಲಿದೆ. ಸಿಕ್ಕಿಂನಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಯಾವುದೇ ಅಸ್ತಿತ್ವವಿಲ್ಲದಂತಾಗಿದೆ. ಈ ರಾಜ್ಯದಲ್ಲಿ ಎನ್ಡಿಎ ಮೈತ್ರಿಕೂಟವು 32 ಸೀಟುಗಳ ಪೈಕಿ 31 ಸೀಟುಗಳನ್ನು ಹೊಂದಿದೆ. ಇದರೊಂದಿಗೆ ಅರುಣಾಚಲ ವಿಧಾನಸಭೆಯಲ್ಲಿ ಇಂಡಿಯಾ ಮೈತ್ರಿಕೂಟವು ಕೇವಲ ನಾಲ್ಕು ಶಾಸಕರನ್ನು ಹೊಂದಿದ್ದು, ಎನ್ಡಿಎ ಮೈತ್ರಿಕೂಟವು 49 ಶಾಸಕರನ್ನು ಹೊಂದಿದೆ.
ಹೀಗಿದ್ದೂ, ಹರ್ಯಾಣ, ಮಹಾರಾಷ್ಟ್ರ ಮತ್ತು ಝಾರ್ಖಂಡ್ ರಾಜ್ಯಗಳಲ್ಲಿ ಎನ್ಡಿಎ ಮತ್ತು ಇಂಡಿಯಾ ಮೈತ್ರಿಕೂಟಗಳ ನಡುವೆ ನೇರ ಹಣಾಹಣಿ ನಡೆಲಿದೆ. 90 ಸದಸ್ಯ ಬಲದ ಹರ್ಯಾಣ ವಿಧಾನಸಭೆಯಲ್ಲಿ ಎನ್ಡಿಎಯ 52 ಶಾಸಕರಿದ್ದರೆ, ಕಾಂಗ್ರೆಸ್ ಪಕ್ಷವು 32 ಶಾಸಕರನ್ನು ಹೊಂದಿದೆ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ 189 ಶಾಸಕರನ್ನು ಹೊಂದಿದ್ದರೆ, ಇಂಡಿಯಾ ಮೈತ್ರಿಕೂಟವು 81 ಶಾಸಕರನ್ನು ಹೊಂದಿದೆ. ಝಾರ್ಖಂಡ್ ರಾಜ್ಯದಲ್ಲಿ ಮಾತ್ರ ಇಂಡಿಯಾ ಮೈತ್ರಿಕೂಟವು ಮೇಲುಗೈ ಸಾಧಿಸಿದ್ದು, 81 ಸದಸ್ಯ ಬಲದ ಝಾರ್ಖಂಡ್ ವಿಧಾನಸಭೆಯಲ್ಲಿ ಎನ್ಡಿಎ ಮೈತ್ರಿಕೂಟವು 29 ಶಾಸಕರನ್ನು ಹೊಂದಿದ್ದರೆ, ಇಂಡಿಯಾ ಮೈತ್ರಿಕೂಟವು 48 ಶಾಸಕರನ್ನು ಹೊಂದಿದೆ.
ಸೌಜನ್ಯ: indianexpress.com