2024ರ ಲೋಕಸಭಾ ಚುನಾವಣೆಯಲ್ಲಿ ನನ್ನ ಕೊನೆಯ ಸ್ಪರ್ಧೆ, ತಿರುವನಂತಪುರಂನಿಂದ ಮೋದಿ ಸ್ಪರ್ಧಿಸಿದರೂ ಗೆಲ್ಲುವೆ: ಶಶಿ ತರೂರ್
ಶಶಿ ತರೂರ್ | Photo: PTI
ತಿರುವನಂತಪುರಂ: 2024ರ ಲೋಕಸಭಾ ಚುನಾವಣೆಯಲ್ಲಿ ನಾನು ನಾಲ್ಕನೆಯ ಬಾರಿಗೆ ರಾಜ್ಯ ರಾಜಧಾನಿಯಿಂದ ಸ್ಪರ್ಧಿಸಲಿದ್ದು, ಈ ಚುನಾವಣೆ ನನ್ನ ಕೊನೆಯದಾಗಲಿದೆ ಎಂದು ಕಾಂಗ್ರೆಸ್ ನಾಯಕ ತಿರುವನಂತಪುರಂ ಸಂಸದ ಶಶಿ ತರೂರ್ ಹೇಳಿದ್ದಾರೆ. ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿಯೇ ತಿರುವನಂತಪುರಂನಿಂದ ಸ್ಪರ್ಧಿಸಿದರೂ ನಾನು ಗೆಲ್ಲುವೆ ಎಂದೂ ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು onmanorama.com ವರದಿ ಮಾಡಿದೆ.
ಟಿವಿ ವಾಹಿನಿಯೊಂದರಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅವರು ತಮ್ಮ ಭವಿಷ್ಯದ ಯೋಜನೆಗಳನ್ನು ಹಂಚಿಕೊಳ್ಳುವಾಗ ಮೇಲಿನ ಮಾತುಗಳನ್ನು ಹೇಳಿದ್ದಾರೆ. "ನಾನು ತಿರುವನಂತಪುರಂನಿಂದ ಸ್ಪರ್ಧಿಸಲು ಸಿದ್ಧನಿದ್ದೇನಾದರೂ, ಅಂತಿಮ ನಿರ್ಧಾರ ಪಕ್ಷಕ್ಕೆ ಸೇರಿದೆ ಹಾಗೂ ಪಕ್ಷ ಹೇಳಿದರೆ ನಾನು ಸ್ಪರ್ಧಿಸುತ್ತೇನೆ. ಇದು ಲೋಕಸಭಾ ಚುನಾವಣೆಯಲ್ಲಿ ನನ್ನ ಕೊನೆಯ ಸ್ಪರ್ಧೆಯಾಗಲಿದೆ. ಒಂದು ವೇಳೆ ಪ್ರಧಾನಿ ಮೋದಿಯೇ ನನ್ನ ವಿರುದ್ಧ ಸ್ಪರ್ಧಿಸಿದರೂ, ನಾನು ಗೆಲ್ಲಲಿದ್ದೇನೆ" ಎಂದು ಪ್ರಧಾನಿ ನರೇಂದ್ರ ಮೋದಿಯವರು ತಿರುವನಂತಪುರಂನಿಂದ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗಳ ಕುರಿತು ಕೇಳಲಾದ ಪ್ರಶ್ನೆಗೆ ಶಶಿ ತರೂರ್ ಉತ್ತರಿಸಿದ್ದಾರೆ.
"ನಾನು ಮೊದಲ ಬಾರಿಗೆ ಸ್ಪರ್ಧಿಸಿದಾಗ, ನಾನು ವಿದೇಶಾಂಗ ಸಚಿವನಾಗಬೇಕು ಎಂಬ ಬಯಕೆ ಇತ್ತಾದರೂ ಅದಾಗಲಿಲ್ಲ. ಇದೀಗ ಜನರೇ ನಿರ್ಧರಿಸಬೇಕಿದೆ" ಎಂದು ಹೇಳಿರುವ ತರೂರ್, "ಸದ್ಯದ ಪರಿಸ್ಥಿತಿಯಲ್ಲಿ ನನ್ನ ದೃಷ್ಟಿಕೋನ ಲೋಕಸಭಾ ಚುನಾವಣೆಯ ಕಡೆಗಿದೆ ಹಾಗೂ ಇದಾದ ನಂತರ ಉದ್ಭವಿಸುವ ಸನ್ನಿವೇಶಗಳನ್ನು ಆಧರಿಸಿ ನಾನು ಮುಂದಿನ ನಡೆಯನ್ನು ನಿರ್ಧರಿಸುತ್ತೇನೆ" ಎಂದು ನೀವೇನಾದರೂ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಸಕ್ತಿ ಹೊಂದಿದ್ದೀರಾ ಎಂಬ ಪ್ರಶ್ನೆಗೆ ಅವರು ಪ್ರತ್ಯುತ್ತರ ನೀಡಿದ್ದಾರೆ.