2026ರ ಚುನಾವಣೆಯು ಡಿಎಂಕೆ ಸರಕಾರವನ್ನು ಕಿತ್ತೊಗೆಯುವ ಸಮಯ : ನಟ ವಿಜಯ್

ವಿಜಯ್ | PTI
ಚೆನ್ನೈ: ಮಹಿಳೆಯರ ಸುರಕ್ಷತೆಯನ್ನು ರಕ್ಷಿಸುವಲ್ಲಿ ವಿಫಲಗೊಂಡಿರುವ ಡಿಎಂಕೆ ಸರಕಾರವನ್ನು ಅಧಿಕಾರದಿಂದ ಕಿತ್ತೊಗೆಯುವ ಶಪಥ ಮಾಡುವಂತೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಾದ ಶನಿವಾರ ನಟ ಹಾಗೂ ತಮಿಳಗ ವೆಟ್ರಿ ಕಳಗಂನ ಮುಖ್ಯಸ್ಥ ವಿಜಯ್ ಮಹಿಳೆಯರಿಗೆ ಕರೆ ನೀಡಿದ್ದಾರೆ.
ತಮಿಳುನಾಡಿನಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಏರಿಕೆಯಾಗುತ್ತಿವೆ ಎಂಬ ವಿರೋಧ ಪಕ್ಷಗಳ ಆರೋಪಗಳ ಬೆನ್ನಿಗೇ ನಟ ವಿಜಯ್ ರಿಂದ ಈ ವಿಡಿಯೊ ಸಂದೇಶ ಹೊರ ಬಿದ್ದಿದೆ.
ಡಿಎಂಕೆ ಸರಕಾರ ಮಹಿಳೆಯರ ಸುರಕ್ಷತೆಯನ್ನು ರಕ್ಷಿಸುವಲ್ಲಿ ವಿಫಲಗೊಂಡಿದೆ ಎಂದು ಆರೋಪಿಸುತ್ತಲೇ ಬರುತ್ತಿರುವ ನಟ ವಿಜಯ್, ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯದ ಸಂಬಂಧ ರಾಜ್ಯಪಾಲ ಆರ್.ಎನ್.ರವಿಯವರನ್ನೂ ಭೇಟಿಯಾಗಿದ್ದರು.
“ನೀವು ಸಂತೋಷವಾಗಿದ್ದೀರಾ? ನಮ್ಮಲ್ಲಿ ಸುರಕ್ಷಿತ ಭಾವನೆಯಿದ್ದಾಗ ಮಾತ್ರ ನಾವು ಸಂತೋಷದ ಭಾವನೆಯನ್ನು ಹೊಂದಿರಲು ಸಾಧ್ಯ ಎಂಬುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಅಂತಹ ಭಾವನೆಗಳಿಲ್ಲದಿದ್ದಾಗ ಹಾಗೂ ಪ್ರತಿದಿನವೂ ಅಸುರಕ್ಷತೆ ಸಹಜವಾಗಿದ್ದಾಗ ಸಂತೋಷ ನಾಪತ್ತೆಯಾಗುವುದು ಸಾಮಾನ್ಯ ಸಂಗತಿ. ಏನು ಮಾಡುವುದು? ಡಿಎಂಕೆಯನ್ನು ಅಧಿಕಾರಕ್ಕೆ ತಂದಿದ್ದು ನಾವೇ ಆಗಿದ್ದು, ಅವರು ನಮಗೆ ವಂಚಿಸಿದರು ಎಂಬುದು ನಮಗೆ ಈಗ ತಾನೆ ಅರ್ಥವಾಗುತ್ತಿದೆ” ಎಂದು ವಿಜಯ್ ತಮ್ಮ ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.
“ಬದಲಾವಣೆ ಮಾತ್ರ ನಿರಂತರ. ಮಹಿಳೆಯರ ಸುರಕ್ಷತೆಯನ್ನು ರಕ್ಷಿಸುವಲ್ಲಿ ವಿಫಲವಾಗಿರುವ ಈ ಸರಕಾರವನ್ನು 2026ರಲ್ಲಿ ಕಿತ್ತೊಗೆಯುವುದನ್ನು ಖಾತರಿ ಪಡಿಸೋಣ” ಎಂದೂ ಅವರು ಕರೆ ನೀಡಿದ್ದಾರೆ.
ಡಿಎಂಕೆ ಸರಕಾರವನ್ನು ತನ್ನ ರಾಜಕೀಯ ವಿರೋಧಿ ಎಂದು ವಿಜಯ್ ಈಗಾಗಲೇ ಘೋಷಿಸಿರುವುದರಿಂದ, ಅವರ ಈ ದಾಳಿ ಯಾವುದೇ ಅಚ್ಚರಿ ಮೂಡಿಸಿಲ್ಲ. 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆಯಂತಹ ಈಗಾಗಲೇ ಬೆಳೆದು ನಿಂತಿರುವ ಯಾವುದೇ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳದೆ, ಸ್ವತಂತ್ರವಾಗಿ ಸ್ಪರ್ಧಿಸಲಾಗುವುದು ಎಂದೂ ತಮಿಳಗ ವೆಟ್ರಿ ಕಳಗಂ ಪಕ್ಷ ಘೋಷಿಸಿದೆ.