ಬಿಜೆಪಿಯ ದೇಣಿಗೆಯಲ್ಲಿ ಶೇಕಡ 23 ಹೆಚ್ಚಳ: ವರದಿ
Photo:twitter.com/BJP
ಹೊಸದಿಲ್ಲಿ: ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಯ ದೇಣಿಗೆ ಸ್ವೀಕೃತಿ 2022-23ರಲ್ಲಿ ಶೇಖಡ 23ರಷ್ಟು ಹೆಚ್ಚಳಗೊಂಡು 2361 ಕೋಟಿ ರೂಪಾಯಿ ತಲುಪಿದೆ ಎಂದು ವರದಿಯಾಗಿದೆ.
ಈ ಪೈಕಿ ಶೇಕಡ 54ರಷ್ಟು ದೇಣಿಗೆ ಚುನಾವಣಾ ಬಾಂಡ್ ಮೂಲಕ ಬಂದಿದೆ. 2021-22ರಲ್ಲಿ ಇದು 1917 ಕೋಟಿ ಆಗಿತ್ತು. ಪಕ್ಷದ ವೆಚ್ಚ ಕೂಡಾ ಶೇಕಡ 59ರಷ್ಟು ಏರಿಕೆ ಕಂಡು 854 ಕೋಟಿ ಕೋಟಿ ರೂಪಾಯಿಗಳಿಂದ 1361 ಕೋಟಿ ರೂಪಾಯಿಗೆ ಹೆಚ್ಚಿದೆ ಎಂದು ತಿಳಿದು ಬಂದಿದೆ.
ಪಕ್ಷಕ್ಕೆ ಚುನಾವಣಾ ಬಾಂಡ್ ಮೂಲಕ 1284 ಕೋಟಿ ರೂಪಾಯಿ ಬಂದಿದೆ. ಇದು 2021-22ರಲ್ಲಿ ಸ್ವೀಕರಿಸಿದ 1033.7 ಕೋಟಿ ರೂಪಾಯಿಗೆ ಹೋಲಿಸಿದರೆ ಶೇಕಡ 25ರಷ್ಟು ಅಧಿಕ ಎಂದು ಬಿಜೆಪಿಯ 2022-23ನೇ ಸಾಲಿನ ಪರಿಶೋಧಿತ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದ ಚುನಾವಣಾ ಆಯೋಗ ಗುರುವಾರ ತಿಳಿಸಿದೆ.
ಇತರ ದೇಣಿಗೆಗಳಲ್ಲಿ ವೈಯಕ್ತಿಕ ಕೊಡುಗೆ, ಕಾರ್ಪೊರೇಟ್ ಹಾಗೂ ಎಲೆಕ್ಟ್ರೊರಲ್ ಟ್ರಸ್ಟ್ಗಳಿಂದ ಬಂದ ಕೊಡುಗೆಗಳು ಸೇರಿದ್ದು, ಒಟ್ಟು 648 ಕೋಟಿ ರೂಪಾಯಿ ಆಗಿದೆ. ಇದು 2021-22ರಲ್ಲಿ ಸ್ವೀಕರಿಸಿದ 721.7 ಕೋಟಿಗೆ ಹೋಲಿಸಿದರೆ ಕಡಿಮೆ. ಆಜೀವನ್ ಸಹಯೋಗ ನಿಧಿಯಿಂದ ಬಂದ ದೇಣಿಗೆ 2021-22ರಲ್ಲಿ ಇದ್ದ 19.9 ಕೋಟಿ ರೂಪಾಯಿಯಿಂದ 177.2 ಕೋಟಿ ರೂಪಾಯಿಗೆ ಹೆಚ್ಚಿದೆ.
ಅದೇ ರೀತಿ ಬ್ಯಾಂಕ್ ಬಡ್ಡಿಯಿಂದ ಬಂದ ಆದಾಯ ಕೂಡಾ 133.3 ಕೋಟಿಯಿಂದ 237.3 ಕೋಟಿಗೆ ಹೆಚ್ಚಳವಾಗಿದೆ. ಒಟ್ಟು ವೆಚ್ಚದಲ್ಲಿ ಶೇಕಡ 80ರಷ್ಟು ಪಾಲು ಚುನಾವಣೆ ಹಾಗೂ ಸಾಮಾನ್ಯ ಪ್ರಚಾರಕ್ಕೆ ವೆಚ್ಚವಾಗಿದೆ. ಈ ಶೀರ್ಷಿಕೆಯಡಿ 1092 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ವೆಚ್ಚ ಮಾಡಲಾಗಿದ್ದು, ಹಿಂದಿನ ವರ್ಷ ಮಾಡಿದ 645.8 ಕೋಟಿಗೆ ಹೋಲಿಸಿದರೆ ಇದು ಅಧಿಕ. ಇದು ಜಾಹೀರಾತು ಮತ್ತು ಪ್ರಸಾರದ ಮೇಲೆ ಮಾಡಿದ 844 ಕೋಟಿ ರೂಪಾಯಿ ವೆಚ್ಚ ಹಾಗೂ 132 ಕೋಟಿ ರೂಪಾಯಿ ಪ್ರವಾಸ ವೆಚ್ಚವನ್ನು ಒಳಗೊಂಡಿದೆ.