ನಾಗಪುರದ 2 ಸರಕಾರಿ ಆಸ್ಪತ್ರೆಗಳಲ್ಲಿ 24 ಗಂಟೆಗಳಲ್ಲಿ 23 ರೋಗಿಗಳು ಸಾವು
Photo: ANI
ನಾಗಪುರ : ಮಹಾರಾಷ್ಟ್ರದ ನಾಗಪುರದಲ್ಲಿರುವ ಸರಕಾರಿ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಗಳಲ್ಲಿ 14 ಮಂದಿ ರೋಗಿಗಳು ಹಾಗೂ ಇನ್ನೊಂದು ಸರಕಾರಿ ಆಸ್ಪತ್ರೆಯಲ್ಲಿ 9 ಮಂದಿ ರೋಗಿಗಳು ಮೃತಪಟ್ಟಿರುವುದು ವರದಿಯಾಗಿದೆ. ನಾಗಪುರದಲ್ಲಿರುವ ಸರಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ(ಜಿಎಂಸಿಎಚ್)ಯಲ್ಲಿ ಬುಧವಾರ ಬೆಳಗ್ಗೆ 8 ಗಂಟೆ ವರೆಗೆ 24 ಗಂಟೆಗಳಲ್ಲಿ 14 ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿ ತಿಳಿಸಿದ್ದಾರೆ.
ಈ ಆಸ್ಪತ್ರೆ 1,900 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ. ಇದರಂತೆ ಅಲ್ಲಿ ದಿನನಿತ್ಯ ಸರಾಸರಿ 10ರಿಂದ 12 ರೋಗಿಗಳು ಸಾವನ್ನಪ್ಪುತ್ತಿದ್ದಾರೆ ಎಂದು ಜಿಎಂಸಿಎಚ್ನ ಡೀನ್ ಡಾ. ರಾಜ್ ಗಜಭಿಯಾ ತಿಳಿಸಿದ್ದಾರೆ.
‘‘ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಹೆಚ್ಚಿನ ರೋಗಿಗಳನ್ನು ಚಿಂತಾಜನಕ ಸ್ಥಿತಿಯಲ್ಲಿ ಹಾಗೂ ತುರ್ತು ನಿಗಾ ಘಟಕ (ಐಸಿಯು)ದಲ್ಲಿ ದಾಖಲಿಸಲು ಇಲ್ಲಿಗೆ ಕರೆ ತರಲಾಗಿದೆ’’ ಎಂದು ಅವರು ಹೇಳಿದ್ದಾರೆ. ಕೇಂದ್ರ ಭಾರತದಾದ್ಯಂತದ ರೋಗಿಗಳು ಈ ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇದೇ ರೀತಿ ನಗರದಲ್ಲಿರುವ ಇಂದಿರಾ ಗಾಂಧಿ ಸರಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಗಳಲ್ಲಿ 9 ಮಂದಿ ರೋಗಿಗಳು ಸಾವನ್ನಪ್ಪಿರುವುದಾಗಿ ಆಸ್ಪತ್ರೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘‘ಮೃತಪಟ್ಟ ರೋಗಿಗಳಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಇಲ್ಲಿ ದಾಖಲಾದವರು ಕೂಡ ಸೇರಿದ್ದಾರೆ. ಇವರಿಗೆ ವೆಂಟಿಲೇಟರ್ನ ಅಗತ್ಯತೆ ಇತ್ತು’’ ಎಂದು ಅಧಿಕಾರಿ ತಿಳಿಸಿದ್ದಾರೆ.
ವಿದರ್ಭ ವಲಯದಾದ್ಯಂತ ರೋಗಿಗಳು ಈ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಐಜಿಜಿಎಂಸಿಎಚ್ 800 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ. ಇಲ್ಲಿ ಪ್ರತಿದಿನ ಸರಾಸರಿ 6 ರೋಗಿಗಳು ಸಾವನ್ನಪ್ಪುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.