ಉತ್ತರ ಪ್ರದೇಶ ಕಾರ್ಮಿಕನಿಗೆ 232 ಕೋಟಿ ರೂಪಾಯಿ ತೆರಿಗೆ ನೋಟಿಸ್!
PC: x.com/MohdAlzamar
ಬರೇಲಿ: ಒಬ್ಬ ಕಸೂತಿ ಕಾರ್ಮಿಕನ ದಾಖಲೆಗಳನ್ನು ಸೃಷ್ಟಿಸಿಕೊಂಡು ನಕಲಿ ರಫ್ತು ಘಟಕವನ್ನು ಸೃಷ್ಟಿಸಿರುವ ಪ್ರಕರಣ ಬರೇಲಿಯಲ್ಲಿ ಬೆಳಕಿಗೆ ಬಂದಿದೆ. 2.32 ಶತಕೋಟಿ ರೂಪಾಯಿ ವಹಿವಾಟು ನಡೆಸಿದ ಕಾರಣಕ್ಕೆ ಕಾರ್ಮಿಕನಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡುವ ಮೂಲಕ ಈ ಪ್ರಕರಣ ಬೆಳಕಿಗೆ ಬಂದಿದೆ.
ವಂಚಕರು ಫೂಲ್ ಮಿಯಾನ್ ಎಂಬಾತನಿಗೆ ಉದ್ಯೋಗ ಒದಗಿಸಿಕೊಡುವ ಸೋಗಿನಲ್ಲಿ ಆತನ ದಾಖಲೆಗಳನ್ನು ಪಡೆದು ದೆಹಲಿಯಲ್ಲಿ ನಕಲಿ ರಫ್ತು ಘಟಕವನ್ನು ಸ್ಥಾಪಿಸಿದ್ದಾರೆ. 232 ಕೋಟಿ ರೂಪಾಯಿ ಮೌಲ್ಯದ ವಹಿವಾಟು ನಡೆಸಿದ್ದಲ್ಲದೇ ತೆರಿಗೆ ವಂಚಿಸಿದ್ದರು.
ಈ ವಹಿವಾಟಿಗಾಗಿ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದ ಹಿನ್ನೆಲೆಯಲ್ಲಿ ಫೂಲ್ ಮಿಯಾನ್ಗೆ ತಾನು ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ತನ್ನ ದಾಖಲೆಗಳನ್ನು ಪಡೆದವರ ಬಳಿ ವಿಚಾರಿಸಿದಾಗ ಅವರು ಈತನನ್ನು ಬೆದರಿಸಿದರು ಎನ್ನಲಾಗಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ.
ಬರೇಲಿಯ ಕ್ವಿಲ್ಲಾ ಪ್ರದೇಶದ ನಿವಾಸಿಯಾಗಿರುವ ಫೂಲ್ ಮಿಯಾನ್, ಕಸೂತಿ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಜತೆಗೆ ಕೆಲಸ ಕಡಿಮೆ ಇದ್ದಾಗ ಲೂದಿಯಾನಾ, ಪಾಣಿಪತ್ ಮತ್ತಿತರ ಕಡೆಗಳಿಗೆ ವಲಸೆ ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಹಲವು ದುಬೈಗೆ ತೆರಳಿದ್ದ ಗುಡ್ಡು ಸುಂದರ್ ಅಲಿಯಾಸ್ ಉವೈಸ್ ಎಂಬಾತನ ಬಳಿ ಉದ್ಯೋಗ ದೊರಕಿಸಿಕೊಡುವಂತೆ ಕೇಳಿಕೊಂಡಿದ್ದಾರೆ. ಆತನನ್ನು ನಂಬಿ ತಮ್ಮ ಆಧಾರ್ ಕಾರ್ಡ್, ಪಾನ್ಕಾರ್ಡ್, ಫೋಟೊ ಮತ್ತು ಇತರ ದಾಖಲೆಗಳನ್ನು ಗುಡ್ಡುಗೆ ಹಸ್ತಾಂತರಿಸಿದ್ದಾರೆ. ಈತ ನಾನ್ಹೆ ಅಲಿಯಸಾಸ್ ಸುಹೈಲ್ ಮತ್ತು ಆಸಿಫ್ ಖಾನ್ ಎಂಬುವವರನ್ನು ಪರಿಚಯಿಸಿದ್ದ. ಶೀಘ್ರವೇ ಉದ್ಯೋಗ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಕೋವಿಡ್ ಲಾಕ್ಡೌನ್ ಕಾರಣದಿಂದ ವಿಳಂಬವಾಗಿದೆ ಎಂದು ಹೇಳಿ, ಕೊನೆಗೂ ಉದ್ಯೋಗ ಕೊಡಿಸಿರಲಿಲ್ಲ.
ಈ ವರ್ಷದ ಫೆಬ್ರುವರಿ 5ರಂದು ದೆಹಲಿ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದಿದ್ದು, 232 ಕೋಟಿ ರೂಪಾಯಿ ವಹಿವಾಟು ನಡೆಸಿದ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದ ತೆರಿಗೆ ಬಾಕಿ ಇದೆ ಎಂದು ತಿಳಿದುಬಂದಿತ್ತು. ಈ ಬಗ್ಗೆ ಗುಡ್ಡು ಮತ್ತು ನಾನ್ಹೆಯನ್ನು ಸಂಪರ್ಕಿಸಿದಾಗ ಈ ದಾಖಲೆಗಳನ್ನು ಬಳಸಿಕೊಂಡು ಕಂಪನಿ ಆರಂಭಿಸಿದ್ದಾಗಿ ಮತ್ತು ಜಿಎಸ್ಟಿ ತೆರಿಗೆಗೆ ನೋಂದಾಯಿಸಿದ್ದಾಗಿ ಒಪ್ಪಿಕೊಂಡಿದ್ದಾರೆ.