ವಯನಾಡ್ ಭೂಕುಸಿತ: 24 ಮಕ್ಕಳು, 57 ಮಹಿಳೆಯರು ಸೇರಿದಂತೆ 130 ಮಂದಿ ಇನ್ನೂ ನಾಪತ್ತೆ
Photo: PTI
ವಯನಾಡ್: ವಯನಾಡು ಭೂಸಿತದಲ್ಲಿ 24 ಮಕ್ಕಳು,57 ಮಹಿಳೆಯರು ಮತ್ತು 49 ಪುರುಷರು ಸೇರಿದಂತೆ 130 ಜನರು ಇನ್ನೂ ನಾಪತ್ತೆಯಾಗಿದ್ದಾರೆ. ವಯನಾಡು ಜಿಲ್ಲಾಡಳಿತವು ಶನಿವಾರ ಬಿಡುಗಡೆಗೊಳಿಸಿರುವ ನಾಪತ್ತೆಯಾಗಿರುವವರ ಪಟ್ಟಿಯಲ್ಲಿ ಬಿಹಾರದ ಮೂವರು ವಲಸೆ ಕಾರ್ಮಿಕರೂ ಇದ್ದಾರೆ.
ವಯನಾಡ್ನ ಸಹಾಯಕ ಕಮಿಷನರ್ ಎಂ.ಗೌತಮ ರಾಜ್ ಅವರ ನೇತೃತ್ವದಲ್ಲಿ ವ್ಯಾಪಕ ಮತ್ತು ಸಂಘಟಿತ ಪ್ರಯತ್ನಗಳ ಬಳಿಕ ಪಟ್ಟಿಯು ಸಿದ್ಧಗೊಂಡಿದ್ದು,ಬ್ಲಾಕ್ ಮಟ್ಟದ ಅಧಿಕಾರಿಗಳು,ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು,ಹಾಲಿ ಮತ್ತು ಮಾಜಿ ಜನ ಪ್ರತಿನಿಧಿಗಳು ಹಾಗೂ ಶಾಲಾ ಪ್ರತಿನಿಧಿಗಳನ್ನೊಂಡ ತಂಡವು ಮಾಹಿತಿಗಳನ್ನು ಸಂಗ್ರಹಿಸಲು ಅವಿರತವಾಗಿ ಶ್ರಮಿಸಿತ್ತು.
ವೈಜ್ಞಾನಿಕ ವಿಧಾನಗಳ ಮೂಲಕ ವಿವಿಧ ಏಜೆನ್ಸಿಗಳನ್ನು ಸಮನ್ವಯಗೊಳಿಸುವ ಕಠಿಣ ಕೆಲಸದ ಬಳಿಕ ಪಟ್ಟಿಯು ಸಿದ್ಧಗೊಂಡಿದೆ. ಜಿಲ್ಲಾಡಳಿತವು ಈ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದೆ ಎಂದು ಮುಖ್ಯಮಂತ್ರಿಗಳ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.
ಪಡಿತರ ಚೀಟಿಗಳ ಮಾಹಿತಿಗಳು,ವಿವಿಧ ಶಾಲೆಗಳಿಂದ ಸಂಗ್ರಹಿಸಿದ ಮಾಹಿತಿಗಳು ಮತ್ತು ಕಾರ್ಮಿಕ ಇಲಾಖೆಯಿಂದ ಪಡೆಯಲಾದ ವಿವರಗಳ ಆಧಾರದಲ್ಲಿ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಪಟ್ಟಿಯು ಶೇ.90ರಿಂದ 95ರಷ್ಟು ನಿಖರ ಮಾಹಿತಿಗಳನ್ನು ಒಳಗೊಂಡಿದೆ ಎಂದು ಸಹಾಯಕ ಕಮಿಷನರ್ ತಿಳಿಸಿದ್ದಾರೆ.
ಸಾರ್ವಜನಿಕರು ಹೊಸ ಮಾಹಿತಿಗಳನ್ನು ಒದಗಿಸಲು ಅಥವಾ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳನ್ನು ವರದಿ ಮಾಡಲು 8078409770 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಡಳಿತವು ತಿಳಿಸಿದೆ.
ಭೂಕುಸಿತದಲ್ಲಿ ಅಧಿಕೃತ ಸಾವುಗಳ ಸಂಖ್ಯೆ 229 ಆಗಿದ್ದು, 148 ಶವಗಳು ವಯನಾಡಿನಲ್ಲಿ ಮತ್ತು 81 ಶವಗಳು ನಿಲಂಬೂರಿನ ಚಾಲಿಯಾರ್ ನದಿಯಲ್ಲಿ ಪತ್ತೆಯಾಗಿವೆ, ಜೊತೆಗೆ 189 ಅಂಗಾಂಗಗಳನ್ನು ಹೊರಕ್ಕೆ ತೆಗೆಯಲಾಗಿದೆ.