ಕ್ರಿಕೆಟ್ ಪಂದ್ಯಾಟದ ವೇಳೆ ಜಗಳ: ಕಲ್ಲಿನಿಂದ ಹೊಡೆದು ಯುವಕನ ಕೊಲೆ
ಸಾಂದರ್ಭಿಕ ಚಿತ್ರ
ನೋಯ್ಡಾ: ನೊಯ್ಡಾ ಎಕ್ಸ್ಟೆನ್ಶನ್ನಲ್ಲಿ ರವಿವಾರ ನಡೆದ ಕ್ರಿಕೆಟ್ ಪಂದ್ಯದ ವೇಳೆ ನಡೆದ ಜಗಳದಲ್ಲಿ ತೀವ್ರವಾಗಿ ಗಾಯಗೊಂಡಿದ್ದ 24 ವರ್ಷದ ಯುವಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಯುವಕನನ್ನು 24 ವರ್ಷದ ಸುಮಿತ್ ಎಂದು ಗುರುತಿಸಲಾಗಿದೆ. ಆತನ ಮೇಲೆ ಮೂವರು ಹಲ್ಲೆ ಮಾಡಿದ್ದು, ತಲೆಗೆ ಕಲ್ಲಿನಿಂದ ಹೊಡೆದ ಪರಿಣಾಮ ಯುವಕ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಸುಮಿತ್ ಮೂವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಚರಂಡಿಗೆ ಬಿದ್ದಿದ್ದು, ಈ ವೇಳೆ ಆತನ ಮೇಲೆ ಮತ್ತೆ ದಾಳಿ ನಡೆಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಉತ್ತರ ಪ್ರದೇಶದ ಮೀರತ್ ಜಿಲ್ಲೆಯವರಾದ ಮೃತರ ಕುಟುಂಬದಿಂದ ಪೊಲೀಸರು ದೂರು ಸ್ವೀಕರಿಸಿದ್ದು, ತನಿಖೆ ಆರಂಭಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಿಪಿಯಾನಾ ಗ್ರಾಮದ ಬಳಿ ಕ್ರಿಕೆಟ್ ಪಂದ್ಯದ ವೇಳೆ ನಡೆದ ಜಗಳದ ಬಗ್ಗೆ ಬಿಸ್ರಖ್ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಮಧ್ಯಾಹ್ನ ಮಾಹಿತಿ ಬಂದಿದೆ. ಸ್ವೀಕರಿಸಿದ ಮಾಹಿತಿಯ ಪ್ರಕಾರ, ಸುಮಿತ್ ದಾಳಿಕೋರರಿಂದ ಓಡಿಹೋಗಲು ಪ್ರಯತ್ನಿಸಿದಾಗ ಆತ ಚರಂಡಿಗೆ ಬಿದ್ದಿದ್ದಾನೆ, ಆದರೂ ಮೂವರು ಹಲ್ಲೆ ನಡೆಸಿ, ಕಲ್ಲುಗಳಿಂದ ತಲೆಗೆ ಹೊಡೆದಿದ್ದಾರೆ. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಉಪ ಪೊಲೀಸ್ ಆಯುಕ್ತ (ಸೆಂಟ್ರಲ್ ನೋಯ್ಡಾ) ಹಿರ್ದೇಶ್ ಕಥೇರಿಯಾ ಅವರು ತಿಳಿಸಿದ್ದಾರೆ.
"ಸುಮಿತ್ ಅವರ ಕುಟುಂಬದಿಂದ ದೂರು ಸ್ವೀಕರಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಅವರು ಹೇಳಿದ್ದಾರೆ.
ಪ್ರಮುಖ ಆರೋಪಿ ಹಿಮಾಂಶು ಮತ್ತು ಇತರ ಇಬ್ಬರ ವಿರುದ್ಧ ಬಿಸ್ರಖ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.