ಪ್ರತಿ ಕೆಜಿಗೆ 260ಕ್ಕೇರಿದ್ದ ಟೊಮ್ಯಾಟೊ ಬೆಲೆ 100ಕ್ಕೆ ಇಳಿಕೆ
ಹೊಸದಿಲ್ಲಿ: ಸುಮಾರು ಹದಿನೈದು ದಿನಗಳ ಹಿಂದೆ ಪ್ರತಿ ಕೆ.ಜಿ.ಗೆ 250-260ರಷ್ಟಿದ್ದ ಟೊಮ್ಯಾಟೊ ಬೆಲೆ ಹಲವು ನಗರಗಳಲ್ಲಿ ಇದೀಗ 100 ರೂಪಾಯಿಗೆ ಇಳಿದಿದೆ. ಎರಡು ಸರ್ಕಾರಿ ಒಡೆತನದ ಸಹಕಾರ ಸಂಸ್ಥೆಗಳಾದ ನಫೆಡ್ ಮತ್ತು ಎನ್ಸಿಸಿಎಫ್ ಮೂಲಕ ವ್ಯಾನ್ಗಳಲ್ಲಿ ಪ್ರತಿ ಕೆ.ಜಿ.ಗೆ 40 ರೂಪಾಯಿ ದರದಲ್ಲಿ ಈ ಅತ್ಯಗತ್ಯ ಆಹಾರ ವಸ್ತುವನ್ನು ಮಾರಾಟ ಮಾಡಲು ಆರಂಭಿಸಿದೆ.
ಟೊಮ್ಯಾಟೊ ಬೆಲೆ ಗಗನಕ್ಕೇರಿದ್ದ ನಗರಗಳಲ್ಲಿ ಇದೇ ಮೊದಲ ಬಾರಿಗೆ ಸರ್ಕಾರ ಟೊಮ್ಯಾಟೊವನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದ್ದು, ಇದುವರೆಗೆ 1500 ಟನ್ ಟೊಮ್ಯಾಟೊವನ್ನು ಮುಕ್ತ ಮಾರುಕಟ್ಟೆಯಲ್ಲಿ ಈ ಎರಡು ಸಹಕಾರಿ ಸಂಸ್ಥೆಗಳು ಮಾರಾಟ ಮಾಡಿವೆ.
ಗ್ರಾಹಕ ವ್ಯವಹಾರಗಳ ಸಚಿವಾಲಯ ಕಲೆ ಹಾಕಿದ ಅಂಕಿ ಅಂಶಗಳ ಪ್ರಕಾರ ಆಗಸ್ಟ್ 4ರಂದು 31 ಕಡೆಗಳಲ್ಲಿ ಟೊಮ್ಯಾಟೊ ಮಾರಾಟ ದರ ಪ್ರತಿ ಕೆ.ಜಿ.ಗೆ ರೂ. 200ಕ್ಕಿಂತ ಅಧಿಕ ಇತ್ತು. ಗರಿಷ್ಠ ಬೆಲೆ 257 ರೂಪಾಯಿ ದಾಖಲಾಗಿತ್ತು. ಆದರೆ ಹದಿನೈದು ದಿನಗಳ ಬಳಿಕ ಅಂದರೆ ಶುಕ್ರವಾರ ಕೇವಲ ಎರಡು ಕಡೆಗಳಲ್ಲಿ ಅಂದರೆ ಅಂಡಮಾನ್ ನಿಕೋಬರ್ ದ್ವೀಪ ಪ್ರದೇಶದಲ್ಲಿ ಮಾತ್ರ ಮಾರಾಟ ಬೆಲೆ 200ಕ್ಕಿಂತ ಅಧಿಕ ಇತ್ತು.
ದೇಶದಲ್ಲಿ ಸರಾಸರಿ ಟೊಮ್ಯಾಟೊ ಮಾರಾಟ ಬೆಲೆ 140 ರೂಪಾಯಿಗಳಿಂದ 96 ರೂಪಾಯಿಗಳಿಗೆ ಇಳಿದಿದೆ. ದೆಹಲಿ, ಕೊಲ್ಕತ್ತಾ ಮತ್ತು ಚೆನ್ನೈನಲ್ಲಿ ಬೆಲೆ ಕ್ರಮವಾಗಿ 97, 100 ಮತ್ತು 52 ರೂಪಾಯಿಗೆ ಇಳಿದಿದೆ. ಮುಂಬೈನಲ್ಲಿ 159 ರೂಪಾಯಿಗಳಿಂದ 147 ರೂಪಾಯಿಗೆ ಇಳಿದಿದೆ.
ಅಧಿಕಾರಿಗಳು ಮುಂದಿನ ಎರಡು ವಾರಗಳ ವರೆಗೆ ಟೊಮ್ಯಾಟೊ ಲಭ್ಯತೆ, ಪೂರೈಕೆ ಮತ್ತು ಬೆಲೆಗಳ ಮೇಲೆ ನಿಗಾ ಇರಿಸಲಿದ್ದಾರೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಬೆಲೆ ಸಹಜ ಸ್ಥಿತಿಗೆ ಬರಲಿದೆ ಎಂದು ಅಂದಾಜಿಸಲಾಗಿದೆ. ಅಂದಾಜಿನ ಪ್ರಕಾರ ಮಾಸಿಕ ಟೊಮ್ಯಾಟೊ ಕೊಯ್ಲು ಈ ವೇಳೆಗೆ ಮೂರು ಪಟ್ಟು ಹೆಚ್ಚಿ 2.14 ಲಕ್ಷ ಟನ್ಗೆ ತಲುಪಲಿದೆ. ಅಕ್ಟೋಬರ್ನಲ್ಲಿ 2.9 ಲಕ್ಷ ಟನ್, ನವೆಂಬರ್ ಹಾಗೂ ಡಿಸೆಂಬರ್ನಲ್ಲಿ ಕ್ರಮವಾಗಿ 3.2 ಲಕ್ಷ ಟನ್ ಹಾಗೂ 3.7 ಲಕ್ಷ ಟನ್ ತಲುಪುವ ನಿರೀಕ್ಷೆ ಇದೆ.