ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ನೀರಜ್ ಚೋಪ್ರಾ ಜಾವೆಲಿನ್ ಫೈನಲ್ | 27.3 ಕೋಟಿ ಜನರಿಂದ ಪಂದ್ಯದ ವೀಕ್ಷಣೆ
ನೀರಜ್ ಚೋಪ್ರಾ
ಪ್ಯಾರಿಸ್: ಭಾರತದ ಮುಂಚೂಣಿ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾರ ಫೈನಲ್ ಪಂದ್ಯ ಹಾಗೂ ಕಂಚಿನ ಪದಕಕ್ಕಾಗಿ ಭಾರತ ಹಾಕಿ ತಂಡ ಸ್ಪೇನ್ ತಂಡದ ವಿರುದ್ಧ ಆಡಿದ ಪಂದ್ಯದ ವೇಳೆ ಭಾರಿ ಪ್ರಮಾಣದ ವೀಕ್ಷಕರು ಒಲಿಂಪಿಕ್ಸ್ ಅಂತರ್ಜಾಲ ತಾಣ ಹಾಗೂ ಅ್ಯಪ್ ಗೆ ಮುಗಿ ಬಿದ್ದಿದ್ದರು ಎಂಬ ಅಂಶ ಬಯಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಕಾರ್ಪೊರೇಟ್ ಸಂವಹನ ಹಾಗೂ ಸಾರ್ವಜನಿಕ ವ್ಯವಹಾರಗಳ ನಿರ್ದೇಶಕ ಕ್ರಿಶ್ಚಿಯನ್ ಕ್ಲಾವ್, ಶುಕ್ರವಾರ 27.3 ಕೋಟಿ ವೀಕ್ಷಕರು ಒಲಿಂಪಿಕ್ಸ್ ಅಂತರ್ಜಾಲ ತಾಣ ಹಾಗೂ ಆ್ಯಪ್ ಗೆ ಭೇಟಿ ನೀಡಿದ್ದರು. ಈ ಪೈಕಿ ಭಾರತೀಯರೇ ಹೆಚ್ಚಾಗಿದ್ದರು. ಅವರೆಲ್ಲ ನೀರಜ್ ಚೋಪ್ರಾ ಯಶಸ್ಸು ಹಾಗೂ ಸತತ ಎರಡನೆ ಬಾರಿ ಕಂಚಿನ ಪದಕ ಗೆದ್ದ ಭಾರತ ತಂಡದ ಪ್ರದರ್ಶನ ನೋಡಲು ಮುಗಿ ಬಿದ್ದಿದ್ದರು ಎಂದು ಹೇಳಿದ್ದಾರೆ.
Olympics Web & App has reached 273 million users for Paris 2024, with the highest number of users from India during these Games yesterday, driven by their 4th and 5th medals from Neeraj Chopra and the Men’s hockey team.
— Christian Klaue (@ChKlaue) August 9, 2024
The Olympics launched two dedicated WhatsApp channels…
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕ್ಲಾವ್, “ಒಲಿಂಪಿಕ್ಸ್ ಅಂತರ್ಜಾಲ ತಾಣ ಹಾಗೂ ಆ್ಯಪ್ ಗೆ ಶುಕ್ರವಾರ 27.3 ಕೋಟಿ ಬಳಕೆದಾರರು ಮುಗಿ ಬಿದ್ದದ್ದರು. ಈ ಪೈಕಿ ಬಹುತೇಕರು ಭಾರತೀಯರಾಗಿದ್ದು, ಅವರೆಲ್ಲ ನೀರಜ್ ಚೋಪ್ರಾ ಹಾಗೂ ಭಾರತ ಪುರುಷರ ಹಾಕಿ ತಂಡದಿಂದ ಕ್ರಮವಾಗಿ ನಾಲ್ಕು ಮತ್ತು ಐದನೇ ಪದಕ ಗಳಿಕೆಯನ್ನು ಎದುರು ನೋಡುತ್ತಿದ್ದರು” ಎಂದು ಬರೆದುಕೊಂಡಿದ್ದಾರೆ.
ಸತತ ಎರಡನೆ ಬಾರಿ ಒಲಿಂಪಿಕ್ಸ್ ಚಿನ್ನ ಗೆಲ್ಲುವ ತವಕದಲ್ಲಿದ್ದ ಭಾರತದ ನೀರಜ್ ಚೋಪ್ರಾ, ತಮ್ಮ ಸಮೀಪದ ಪ್ರತಿಸ್ಪರ್ಧಿ ಪಾಕಿಸ್ತಾನದ ಅರ್ಶದ್ ನದೀಮ್ ಅವರಿಗಿಂತ ಹಿಂದೆ ಬಿದ್ದಿದ್ದರಿಂದ, ಬೆಳ್ಳಿ ಪದಕಕ್ಕೆ ತೃಪ್ತರಾಗಬೇಕಾಯಿತು.
ಕಂಚಿನ ಪದಕಕ್ಕಾಗಿ ನಡೆದ ಪುರುಷರ ಹಾಕಿ ಪಂದ್ಯದಲ್ಲಿ ಭಾರತ ತಂಡವು ಸ್ಪೇನ್ ತಂಡವನ್ನು 2-1 ಅಂತರದಲ್ಲಿ ಮಣಿಸಿತ್ತು. ಆ ಮೂಲಕ ಸತತ ಎರಡನೆ ಬಾರಿ ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿತ್ತು.