ಮಧ್ಯಾಹ್ನದ ಬಿಸಿಯೂಟ ಸೇವಿಸಿ 28 ಮಕ್ಕಳು ತೀವ್ರ ಅಸ್ವಸ್ಥ
Photo: India Today
ಹೊಸದಿಲ್ಲಿ: ಪಶ್ಚಿಮ ದೆಹಲಿಯ ಇಂದ್ರಪುರಿ ಮುನ್ಸಿಪಲ್ ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟ ಸೇವಿಸಿದ 28 ಮಂದಿ ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ತಡರಾತ್ರಿವರೆಗೂ ಅವರ ಅಸ್ವಸ್ಥತೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲವಾದರೂ, ರೈಲು ವ್ಯಾಗನ್ನಿಂದ ಉಂಟಾದ ಅನಿಲ ಸೋರಿಕೆ ಮಕ್ಕಳ ಅಸ್ವಸ್ಥತೆಗೆ ಕಾರಣ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ದೂರಿದ್ದಾರೆ. ಆದರೆ ಇದನ್ನು ಉತ್ತರ ರೈಲ್ವೆ ನಿರಾಕರಿಸಿದೆ.
ಮಕ್ಕಳು ಚಿಕಿತ್ಸೆ ಪಡೆಯುತ್ತಿರುವ ರಾಮ್ ಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ಹಾಜರಿದ್ದ ಪೋಷಕರು, ಮಕ್ಕಳ ಅಸ್ವಸ್ಥತೆಗೆ ಅನಿಲ ಸೋರಿಕೆ ಕಾರಣವಲ್ಲ. ಬಹುಶಃ ಮಧ್ಯಾಹ್ನ ಮಕ್ಕಳಿಗೆ ನೀಡಿದ ಬಿಸಿಯೂಟ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಂದ್ರಪುರಿಯ ನಿಗಮ್ ಪ್ರತಿಭಾ ವಿದ್ಯಾಲಯದಲ್ಲಿ ಮಕ್ಕಳು ಅಸ್ವಸ್ಥರಾಗಿರುವ ಬಗ್ಗೆ ಪೊಲೀಸರಿಗೆ ಕರೆ ಬಂದಿದ್ದು, ಶಾಲೆಗೆ ಧಾವಿಸಿದಾಗ, 9-10 ವರ್ಷ ವಯಸ್ಸಿನ ವಿದ್ಯಾರ್ಥಿನಿಯರು ಹೊಟ್ಟೆನೋವು ಮತ್ತು ವಾಂತಿಯಾಗುವ ಬಗ್ಗೆ ದೂರಿದರು. ಈ ಪೈಕಿ ಇಬ್ಬರಿಗೆ ಉಸಿರಾಟದ ಸಮಸ್ಯೆಯೂ ಕಾಣಿಸಿಕೊಂಡಿತ್ತು ಎಂದು ಅಧಿಕಾರಿಗಳು ವಿವರ ನೀಡಿದ್ದಾರೆ.
15 ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು ಆರ್ ಎಂಎಲ್ ಆಸ್ಪತ್ರೆಗೆ ದಾಖಲಿಸಿದ್ದು, ಉಳಿದ ಒಂಬತ್ತು ಮಂದಿಯನ್ನು ಆಚಾರ್ಯ ಭಿಕ್ಷು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಮತ್ತೆ ನಾಲ್ವರು ವಿದ್ಯಾರ್ಥಿಗಳನ್ನು ಆರ್ ಎಂಎಲ್ ಗೆ ದಾಖಲಿಸಲಾಯಿತು ಎಮದು ಪೊಲೀಸರು ಹೇಳಿದ್ದಾರೆ.
ಸಂಜೆಯ ವೇಳೆಗೆ ಮಕ್ಕಳ ಆರೋಗ್ಯಸ್ಥಿತಿ ಸುಧಾರಿಸಿದ್ದು, ಕೆಲವರನ್ನು ಬಿಡುಗಡೆ ಮಾಡಲಾಗಿದೆ. ಮಕ್ಕಳ ಆರೋಗ್ಯಸ್ಥಿತಿ ಸ್ಥಿರವಾಗಿದ್ದು, ಹಲವು ರೋಗಲಕ್ಷಣಗಳು ಕಂಡುಬಂದಿರುವುದರಿಂದ ಅಸ್ವಸ್ಥತೆಗೆ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ ಎಂದು ಆರ್ ಎಂಎಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅಜಯ್ ಶುಕ್ಲಾ ಹೇಳಿದ್ದಾರೆ.