ಎರಡು ವರ್ಷಗಳಲ್ಲಿ ಗುಜರಾತ್ನಲ್ಲಿ 286 ಸಿಂಹಗಳು, 456 ಚಿರತೆಗಳು ಸಾವು

ಸಾಂದರ್ಭಿಕ ಚಿತ್ರ (credit:X/@narendramodi)
ಹೊಸದಿಲ್ಲಿ: ಕಳೆದ ಎರಡು ವರ್ಷಗಳಲ್ಲಿ ಗುಜರಾತ್ನಲ್ಲಿ ಕನಿಷ್ಠ 286 ಸಿಂಹಗಳು ಸಾವನ್ನಪ್ಪಿವೆ. ಅವುಗಳಲ್ಲಿ 143 ಮರಿಗಳು ಸೇರಿವೆ. ಈ ಸಾವುಗಳಲ್ಲಿ 58 ಅಸ್ವಾಭಾವಿಕ ಕಾರಣಗಳಿಂದಾಗಿವೆ ಎಂದು ರಾಜ್ಯ ಅರಣ್ಯ ಸಚಿವ ಮುಲುಭಾಯಿ ಬೇರಾ ಮಂಗಳವಾರ ವಿಧಾನ ಸಭೆಗೆ ಮಾಹಿತಿ ನೀಡಿದರು.
ಪ್ರಶ್ನೋತ್ತರ ಅವಧಿಯಲ್ಲಿ ಹಿರಿಯ ಕಾಂಗ್ರೆಸ್ ಶಾಸಕ ಶೈಲೇಶ್ ಪರ್ಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಬೇರಾ, ರಾಜ್ಯದಲ್ಲಿ 2023 ಮತ್ತು 2024 ರಲ್ಲಿ ಎರಡು ವರ್ಷಗಳಲ್ಲಿ 140 ಮರಿಗಳು ಸೇರಿದಂತೆ 456 ಚಿರತೆಗಳು ಸಾವನ್ನಪ್ಪಿವೆ ಎಂದು ಹೇಳಿದರು.
286 ಸಿಂಹಗಳ ಪೈಕಿ 2023 ರಲ್ಲಿ 121 ಮತ್ತು 2024 ರಲ್ಲಿ 165 ಮೃತ್ಯು ಪ್ರಕರಣಗಳು ವರದಿಯಾಗಿವೆ ಎಂದು ಅವರು ಹೇಳಿದರು.
ವಿಶ್ವದ ಏಷ್ಯ ಪ್ರಬೇಧದ ಸಿಂಹಗಳು ಗುಜರಾತ್ ನಲ್ಲಿ ಮಾತ್ರ ಕಂಡು ಬರುತ್ತದೆ. ಜೂನ್ 2020 ರಲ್ಲಿ ನಡೆಸಿದ ಕೊನೆಯ ಜನಗಣತಿಯ ಪ್ರಕಾರ, ಗುಜರಾತ್ ನಲ್ಲಿ 674 ಏಷ್ಯ ಪ್ರಬೇಧದ ಸಿಂಹಗಳಿವೆ. ಇವು ಮುಖ್ಯವಾಗಿ ಗಿರ್ ವನ್ಯಜೀವಿ ಅಭಯಾರಣ್ಯದಲ್ಲಿ ಕಂಡು ಬರುತ್ತದೆ.
2023 ರಲ್ಲಿ 225 ಮತ್ತು 2024 ರಲ್ಲಿ 231 ಚಿರತೆಗಳು ಮೃತಪಟ್ಟಿವೆ ಎಂದು ಅರಣ್ಯ ಸಚಿವ ಮುಲುಭಾಯಿ ಬೇರಾ ವಿಧಾನಸಭೆಯಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
228 ಸಿಂಹಗಳು ನೈಸರ್ಗಿಕ ಕಾರಣಗಳಿಂದ ಸಾವನ್ನಪ್ಪಿದ್ದರೆ, 58 ಸಿಂಹಗಳು ವಾಹನಗಳಿಗೆ ಢಿಕ್ಕಿ ಹೊಡೆದು ಅಥವಾ ತೆರೆದ ಬಾವಿಗೆ ಬಿದ್ದು ಅಸ್ವಾಭಾವಿಕ ಕಾರಣಗಳಿಂದ ಮೃತಪಟ್ಟಿವೆ ಎಂದು ಅವರು ಹೇಳಿದರು.
ಚಿರತೆಗಳ ಪೈಕಿ, 303 ಸಾವುಗಳು ನೈಸರ್ಗಿಕ ಕಾರಣಗಳಿಂದ ಸಂಭವಿಸಿವೆ ಮತ್ತು 153 ಸಾವುಗಳು ಅಸ್ವಾಭಾವಿಕ ಕಾರಣಗಳಿಂದ ಸಂಭವಿಸಿವೆ ಎಂದು ಬೇರಾ ಹೇಳಿದರು.
ಸಿಂಹಗಳ ಅಸ್ವಾಭಾವಿಕ ಸಾವುಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರವು ಪಶುವೈದ್ಯರ ನೇಮಕಾತಿ ಮತ್ತು ಸಿಂಹಗಳು ಮತ್ತು ಇತರ ಕಾಡು ಪ್ರಾಣಿಗಳ ತುರ್ತು ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಸೇವೆಯನ್ನು ಪರಿಚಯಿಸುವಂತಹ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ಸದನಕ್ಕೆ ತಿಳಿಸಿದರು.
ಅಲ್ಲದೇ ಅಭಯಾರಣ್ಯ ಪ್ರದೇಶಗಳ ಮೂಲಕ ಹಾದುಹೋಗುವ ರಸ್ತೆಗಳಲ್ಲಿ ವೇಗ ನಿರೋಧಕಗಳನ್ನು ಅಳವಡಿಸುವುದು ಮತ್ತು ಸೂಚನಾ ಫಲಕಗಳನ್ನು ಅಳವಡಿಸುವುದು, ಕಾಡುಗಳಲ್ಲಿ ನಿಯಮಿತವಾಗಿ ಗಸ್ತು ತಿರುಗುವುದು, ಕಾಡುಗಳ ಬಳಿ ತೆರೆದ ಬಾವಿಗಳಿಗೆ ಪ್ಯಾರಪೆಟ್ ಗೋಡೆಗಳನ್ನು ನಿರ್ಮಿಸುವುದು, ಗಿರ್ ವನ್ಯಜೀವಿ ಅಭಯಾರಣ್ಯದ ಬಳಿ ರೈಲ್ವೆ ಹಳಿಯ ಎರಡೂ ಬದಿಗಳಲ್ಲಿ ಬೇಲಿಗಳನ್ನು ಹಾಕುವುದು ಮತ್ತು ಸಿಂಹಗಳ ಚಲನವಲನಗಳನ್ನು ಪತ್ತೆಹಚ್ಚಲು ರೇಡಿಯೋ-ಕಾಲರ್ ಅಳವಡಿಸುವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.