ದೇಶದಲ್ಲಿ ಪ್ರತಿ ನಿಮಿಷಕ್ಕೆ 3 ಬಲವಂತದ ಬಾಲ್ಯವಿವಾಹ!
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ದೇಶದಲ್ಲಿ ಪ್ರತಿ ನಿಮಿಷಕ್ಕೆ ಮೂವರು ಬಾಲಕಿಯರಿಗೆ ಬಲವಂತದ ಬಾಲ್ಯವಿವಾಹ ನೆರವೇರಿಸಲಾಗುತ್ತದೆ ಎಂಬ ಆತಂಕಕಾರಿ ಅಂಶವನ್ನು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ. ಆದರೆ 2022ರವರೆಗೆ ಪ್ರತಿ ದಿನ ಕೇವಲ ಮೂರು ಪ್ರಕರಣಗಳು ಮಾತ್ರ ದಾಖಲಾಗುತ್ತಿವೆ.
ಸರಾಸರಿ ಪ್ರತಿ ಜಿಲ್ಲೆಯಲ್ಲಿ 2022ರಲ್ಲಿ ಕೇವಲ ಒಂದು ಬಾಲ್ಯವಿವಾಹ ಪ್ರಕರಣ ಮಾತ್ರ ದಾಖಲಾಗಿದೆ ಎನ್ನುವ ಅಂಶ ಸರ್ಕಾರಿ ಅಂಕಿ ಅಂಶಗಳ ವಿಶ್ಲೇಷಣೆಯಿಂದ ತಿಳಿದು ಬಂದಿದೆ ಎಂದು 'ಇಂಡಿಯಾ ಚೈಲ್ಡ್ ಪ್ರೊಟೆಕ್ಷನ್' ಸಂಶೋಧನಾ ತಂಡ ಹೇಳಿದೆ. ಬಾಲ್ಯವಿವಾಹ ಮುಕ್ತ ಭಾರತ ಎಂಬ ವಿಸ್ತೃತ ಯೋಜನೆಯ ಸಂಶೋಧನಾ ತಂಡ ಇದಾಗಿದೆ.
2011ರ ಜನಗಣತಿ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಮತ್ತು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5ರ ಅಂಕಿ ಅಂಶಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಬಾಲ್ಯವಿವಾಹದ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿರುವ ಈ ವರದಿಯ ಪ್ರಕಾರ, ಅಸ್ಸಾಂನಿಂದ ಇಡೀ ದೇಶ ಪಾಠ ಕಲಿಯಬಹುದಾಗಿದೆ. ರಾಜ್ಯದ 20 ಜಿಲ್ಲೆಗಳ 1132 ಗ್ರಾಮಗಳಲ್ಲಿ 2021-22 ಮತ್ತು 2023-24ರ ಅವಧಿಯಲ್ಲಿ ಬಾಲ್ಯವಿವಾಹಗಳ ಸಂಖ್ಯೆ ಶೇಕಡ 81ರಷ್ಟು ಕಡಿಮೆಯಾಗಿದೆ. 2021-22ರಲ್ಲಿ 3225 ಬಾಲ್ಯವಿವಾಹ ಬೆಳಕಿಗೆ ಬಂದಿದ್ದರೆ, 2023-24ರಲ್ಲಿ ಇದು 627ಕ್ಕೆ ಇಳಿದಿದೆ.
ದೇಶಮಟ್ಟದಲ್ಲಿನ ಅಂಕಿ ಅಂಶಗಳ ಪ್ರಕಾರ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊದಿಂದ ತಿಳಿದುಬರುವಂತೆ 2018-22ರ ಅವಧಿಯಲ್ಲಿ ಕೇವಲ 3863 ಪ್ರಕರಣಗಳು ದಾಖಲಾಗಿದೆ. 2011ರ ಜನಗಣತಿಯ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಪ್ರತಿ ವರ್ಷ 16,21,257 ಬಾಲ್ಯವಿವಾಹ ನಡೆಯುತ್ತಿದೆ. ಅಂದರೆ ದಿನಕ್ಕೆ 4442 ಬಾಲ್ಯವಿವಾಹಗಳು ನಡೆಯುತ್ತಿವೆ. ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಅಂದಾಜಿನ ಪ್ರಕಾರ, 20-24 ವರ್ಷ ವಯಸ್ಸಿನ ಒಟ್ಟು ಮಹಿಳೆಯರ ಪೈಕಿ ಶೇಕಡ 23.3ರಷ್ಟು ಮಂದಿ 18ನೇ ವರ್ಷಕ್ಕಿಂತ ಮೊದಲೇ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.