ರೈಲು ಹರಿದು ಮೂವರು ರೈಲ್ವೇ ಸಿಬ್ಬಂದಿಗಳು ಮೃತ್ಯು
ಸಾಂದರ್ಭಿಕ ಚಿತ್ರ (PTI)
ಮುಂಬೈ: ರೈಲ್ವೆ ಹಳಿ ರಿಪೇರಿ ಕೆಲಸದಲ್ಲಿ ನಿರತರಾಗಿದ್ದ ಮೂವರು ರೈಲು ಸಿಬ್ಬಂದಿಗಳ ಮೇಲೆ ರೈಲೊಂದು ಹರಿದಿದ್ದರಿಂದ ಅವರೆಲ್ಲ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮುಂಬೈ ಬಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು hindustantimes.com ವರದಿ ಮಾಡಿದೆ.
ಮೃತರನ್ನು ಮುಖ್ಯ ಸಿಗ್ನಲಿಂಗ್ ಪರಿವೀಕ್ಷಕ ಭಯಾಂಡರ್ ವಾಸು ಮಿತ್ರ, ಎಲೆಕ್ಟ್ರಿಕಲ್ ಸಿಗ್ನಲಿಂಗ್ ನಿರ್ವಹಣಾಕಾರ ಸೋಮನಾಥ್ ಉತ್ತಮ್ ಲಾಂಬುತ್ರೆ ಹಾಗೂ ಸಹಾಯಕ ಸಚಿನ್ ವಾಂಖಡೆ ಎಂದು ಗುರುತಿಸಲಾಗಿದೆ. ಅವರೆಲ್ಲರೂ ಮುಂಬೈ ವಲಯದ ಸಿಗ್ನಲಿಂಗ್ ವಿಭಾಗಕ್ಕೆ ಸೇರಿದ್ದರು ಎಂದು ಪಶ್ಚಿಮ ರೈಲ್ವೆ ವಲಯ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ.
“ಜನವರಿ 22, 2024ರಂದು ಕರ್ತವ್ಯನಿರತರಾಗಿದ್ದ ಪಶ್ಚಿಮ ರೈಲ್ವೆ ವಲಯದ ಮೂವರು ನೌಕರರು ದುರ್ಘಟನೆಯೊಂದರಲ್ಲಿ ತಮ್ಮ ಜೀವ ಕಳೆದುಕೊಂಡಿದ್ದಾರೆ. ಅವರು ಸಂಜೆ ವಿಫಲಗೊಂಡಿದ್ದ ಸಿಗ್ನಲಿಂಗ್ ಪಾಯಿಂಟ್ ಗಳನ್ನು ರಿಪೇರಿ ಮಾಡಲು ತೆರಳಿದ್ದರು. ವಸಾಯಿ ರಸ್ತೆಯಿಂದ ಉತ್ತರ ಪ್ರದೇಶದ ಮಾರ್ಗವಾಗಿ ನಾಯ್ಗಾಂವ್ ಗೆ ತೆರಳುತ್ತಿದ್ದ ನಿಧಾನ ಗತಿಯ ರೈಲೊಂದು ಅವರ ಮೇಲೆ ಹರಿದಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ” ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆಯೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಹಾಗೂ ಇತರ ಹಿರಿಯ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಸಂತ್ರಸ್ತರ ಕುಟುಂಬದ ಸದಸ್ಯರಿಗೆ ನೆರವು ಒದಗಿಸಿದ್ದಾರೆ. ಪ್ರತಿ ಸಂತ್ರಸ್ತನ ಕುಟುಂಬದ ಸದಸ್ಯರಿಗೂ ತಕ್ಷಣದ ಪರಿಹಾರವಾಗಿ ತಲಾ ರೂ. 55,000 ಒದಗಿಸಲಾಗಿದೆ ಎಂದು ಪಶ್ಚಿಮ ವಲಯ ರೈಲ್ವೆಯು ತಿಳಿಸಿದೆ.