ತಮಿಳುನಾಡು | ಶಾಲಾ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ: ಮೂವರು ಅಧ್ಯಾಪಕರ ಬಂಧನ
Photo | indiatoday.in
ಕೃಷ್ಣಗಿರಿ : ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸರಕಾರಿ ಶಾಲೆಯಲ್ಲಿ ಮೂವರು ಅಧ್ಯಾಪಕರು 13 ವರ್ಷದ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಮೂವರು ಅಧ್ಯಾಪಕರನ್ನು ಬುಧವಾರ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಬಾಲಕಿ ಶಾಲೆಗೆ ನಿರಂತರ ಗೈರು ಹಾಜರಾದ ಹಿನ್ನೆಲೆಯಲ್ಲಿ ಮುಖ್ಯೋಪಾಧ್ಯಾಯಿನಿ ಮಂಗಳವಾರ ಆಕೆಯ ಮನೆಗೆ ಭೇಟಿ ನೀಡಿದ್ದರು. ಈ ಸಂದರ್ಭ ಬಾಲಕಿಯ ಹೆತ್ತವರು ಮೂವರು ಅಧ್ಯಾಪಕರು ಆಕೆಯನ್ನು ಸಾಮೂಹಿಕ ಅತ್ಯಾಚಾರ ಎಸಗಿದ ಬಗ್ಗೆ ಮುಖ್ಯೋಪಾಧ್ಯಾಯಿನಿಗೆ ತಿಳಿಸಿದರು. ಅನಂತರ ಈ ಘಟನೆ ಬೆಳಕಿಗೆ ಬಂದಿದೆ.
ಮುಖ್ಯೋಪಾಧ್ಯಾಯಿನಿ ಅದೇ ರಾತ್ರಿ ಜಿಲ್ಲಾ ಚೈಲ್ಡ್ ಲೈನ್ ನಲ್ಲಿ ದೂರು ದಾಖಲಿಸಿದ್ದರು. ಜಿಲ್ಲಾ ಚೈಲ್ಡ್ ಲೈನ್ ನ ಅಧಿಕಾರಿಗಳು ಬಾಲಕಿಯ ಮನೆಗೆ ಭೇಟಿ ನೀಡಿದ್ದರು ಹಾಗೂ ತನಿಖೆ ಆರಂಭಿಸಿದ್ದರು. ಬಳಿಕ ಅವರು ಈ ಪ್ರಕರಣವನ್ನು ಪೊಲೀಸರಿಗೆ ವರದಿ ಮಾಡಿದ್ದರು.
ಓರ್ವ ಅಧ್ಯಾಪಕ ಬಾಲಕಿಯನ್ನು ಮೊದಲು ಅತ್ಯಾಚಾರ ಎಸಗಿದ. ಈ ವಿಚಾರ ಇತರ ಇಬ್ಬರು ಅಧ್ಯಾಪಕರಿಗೆ ತಿಳಿಯಿತು. ಅನಂತರ ಮೂವರು ಅಧ್ಯಾಪಕರು ಸೇರಿ ಬಾಲಕಿಯ ಸಾಮೂಹಿಕ ಅತ್ಯಾಚಾರ ಎಸಗಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣಕ್ಕೆ ಸಂಬಂಧಿಸಿ ನಾವು ಮೂವರು ಅಧ್ಯಾಪಕರನ್ನು ಬಂಧಿಸಿದ್ದೇವೆ. ಅವರ ವಿರುದ್ಧ ಪೊಕ್ಸೊ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಈ ಮೂವರು ಅಧ್ಯಾಪಕರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಕೃಷ್ಣಗರಿ ಎಸ್ಪಿ ಪಿ. ತಂಗದುರೈ ತಿಳಿಸಿದ್ದಾರೆ.
ಘಟನೆಯ ಕುರಿತಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಬಾಲಕಿಯ ಕುಟುಂಬದ ಸದಸ್ಯರು, ಸಂಬಂಧಿಕರು ಹಾಗೂ ನಿವಾಸಿಗಳು ಬುಧವಾರ ಇಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ಪ್ರಕರಣದಲ್ಲಿ ಭಾಗಿಯಾದ ಅಧ್ಯಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಎಸ್ಪಿ ತಂಗದುರೈ ಅವರು ಭರವಸೆ ನೀಡಿದ ಬಳಿಕ ಅವರು ಚದುರಿದರು.
ಬಾಲಕಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ
https://whatsapp.com/channel/0029VaA8ju86LwHn9OQpEq28