ನಟಿ-ರೂಪದರ್ಶಿ ಕಾದಂಬರಿ ಜೇಠ್ವಾನಿಗೆ ಕಿರುಕುಳ ಆರೋಪ: ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ ಅಮಾನತು
ಕಾದಂಬರಿ ಜೇಠ್ವಾನಿ (Photo: thenewsminute.com)
ಅಮರಾವತಿ: ಸಮರ್ಪಕ ತನಿಖೆ ನಡೆಸದೆ ಮುಂಬೈ ಮೂಲದ ನಟಿ-ರೂಪದರ್ಶಿ ಕಾದಂಬರಿ ಜೇಠ್ವಾನಿ ಅವರನ್ನು ಕಾನೂನುಬಾಹಿರವಾಗಿ ಬಂಧಿಸಿ, ಅವರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಡಿಜಿ ದರ್ಜೆಯ ಐಪಿಎಸ್ ಅಧಿಕಾರಿಯೊಬ್ಬರು ಸೇರಿದಂತೆ ಮೂವರು ಐಪಿಎಸ್ ಅಧಿಕಾರಿಗಳನ್ನು ಆಂಧ್ರ ಪ್ರದೇಶ ಸರಕಾರ ಅಮಾನತುಗೊಳಿಸಿದೆ.
ಮಾಜಿ ಗುಪ್ತಚರ ವಿಭಾಗದ ಮುಖ್ಯಸ್ಥ ಪಿ.ಸೀತಾರಾಂ ಆಂಜನೇಯುಲು (ಡಿಜಿ ದರ್ಜೆ), ಮಾಜಿ ವಿಜಯವಾಡ ಪೊಲೀಸ್ ಆಯುಕ್ತ ಕ್ರಾಂತಿ ರಂಗ ಟಾಟಾ (ಐಜಿ ದರ್ಜೆ) ಹಾಗೂ ಮಾಜಿ ಉಪ ಪೊಲೀಸ್ ಆಯುಕ್ತ ವಿಶಾಲ್ ಗುನ್ನಿ (ಅಧೀಕ್ಷಕ ದರ್ಜೆ) ಅಮಾನತುಗೊಂಡ ಅಧಿಕಾರಿಗಳಾಗಿದ್ದಾರೆ.
ಫೆಬ್ರವರಿ ತಿಂಗಳಲ್ಲಿ ತನ್ನ ವಿರುದ್ಧ ಫೋರ್ಜರಿ ಮತ್ತು ಸುಲಿಗೆ ಪ್ರಕರಣವನ್ನು ದಾಖಲಿಸಿದ್ದ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಚಿತ್ರ ನಿರ್ಮಾಪನ ಕೆ.ವಿ.ಆರ್.ವಿದ್ಯಾಸಾಗರ್ ಅವರೊಂದಿಗೆ ಸೇರಿಕೊಂಡು ಮೇಲಿನ ಅಧಿಕಾರಿಗಳು ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಜೇಠ್ವಾನಿ ಎನ್ಟಿ ಆರ್ ಪೊಲೀಸ್ ಆಯುಕ್ತ ಎಸ್.ವಿ.ರಾಜಶೇಖರ್ ಬಾಬು ಬಳಿ ಅಧಿಕೃತ ದೂರು ದಾಖಲಿಸಿದ್ದರು. ವಿದ್ಯಾಸಾಗರ್ ಅವರೊಂದಿಗೆ ಸದರಿ ಉನ್ನತ ದರ್ಜೆಯ ಅಧಿಕಾರಿಗಳು ಕೈಮಿಲಾಯಿಸಿ, ನನಗೆ ಮತ್ತು ನನ್ನ ಪೋಷಕರಿಗೆ ಕಿರುಕುಳ ನೀಡಲು ನನಗೆ ಯಾವುದೇ ಪೂರ್ವ ನೋಟಿಸ್ ನೀಡದೆ ಮುಂಬೈನಿಂದ ವಿಜಯವಾಡಕ್ಕೆ ಕರೆದೊಯ್ದಿದ್ದರು ಎಂದು ಅವರು ಆರೋಪಿಸಿದ್ದರು.
ನನ್ನನ್ನು ಮತ್ತು ನನ್ನ ವಯೋವೃದ್ಧ ಪೋಷಕರನ್ನು ಪೊಲೀಸರು ಅಕ್ರಮವಾಗಿ ಬಂಧಿಸಿದ್ದರು ಹಾಗೂ ನಾವು 40 ದಿನಗಳಿಗೂ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿ ಕಳೆಯಬೇಕಾಗಿ ಬಂದಿತ್ತು ಎಂದೂ ಮುಂಬೈ ಮೂಲದ ಜೇಠ್ವಾಗನಿ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಈ ದೂರನ್ನು ಆಧರಿಸಿ ನಡೆದ ತನಿಖೆಯ ಸಂದರ್ಭದಲ್ಲಿ, ಎಫ್ ಐ ಆರ್ ದಾಖಲಾಗುವುದಕ್ಕೂ ಮುನ್ನವೇ ಜೇಠ್ವಾನಿಯನ್ನು ಬಂಧಿಸಲು ಆಂಜನೇಯುಲು ಇನ್ನಿಬ್ಬರು ಅಧಿಕಾರಿಗಳಿಗೆ ಆದೇಶಿಸಿದ್ದರು ಎಂಬ ಸಂಗತಿ ಬಯಲಾಗಿದೆ. ಫೆಬ್ರವರಿ 2ರಂದು ಎಫ್ ಐ ಆರ್ ದಾಖಲಾಗಿದ್ದರೆ, ಜೇಠ್ವಾನಿಯವರನ್ನು ಜನವರಿ 31ರಂದೇ ಬಂಧಿಸಿರುವುದೂ ತನಿಖೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.