ಶ್ರೀನಗರ: ಪೊಲೀಸ್ ಮೇಲೆ ಗುಂಡಿನ ದಾಳಿ ನಡೆಸಿದ್ದ ಮೂವರು ಉಗ್ರರ ಬಂಧನ
ಶ್ರೀನಗರ: ಕಳೆದ ವಾರ ಶ್ರೀನಗರದ ಬೆಮಿನಾ ಪ್ರದೇಶದಲ್ಲಿ ಕರ್ತವ್ಯದಲ್ಲಿರದ ಪೊಲೀಸ್ ಅಧಿಕಾರಿಯ ವಿರುದ್ಧ ಗುಂಡಿನ ದಾಳಿ ನಡೆಸಿದ್ದ ಮೂವರು ಉಗ್ರರನ್ನು ಪೊಲೀಸರು ರವಿವಾರ ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಬಂಧಿಸಿದ್ದಾರೆ.
‘‘ಕೂಲಂಕಶ ತನಿಖೆ ಹಾಗೂ ದೃಢವಾದ ಪುರಾವೆಗಳನ್ನು ಸಂಗ್ರಹಿಸಿದ ಆನಂತರ ಪೊಲೀಸರು ಇಮ್ತಿಯಾಝ್ ಖಾಂಡಾಯ್, ಮೆಹ್ನಾನ್ ಖಾನ್ ಹಾಗೂ ದಾನಿಶ್ ಮಾಲಾ (ಎಲ್ಲರೂ ಶ್ರೀನಗರದ ನಿವಾಸಿಗಳು) ಅವರನ್ನು ಬಂಧಿಸಿದ್ದಾರೆ ಎಂದು ಜಮ್ಮುಕಾಶ್ಮೀರ ಪೊಲೀಸ್ ವರಿಷ್ಠ ಆರ್.ಆರ್.ಸ್ವೆಯಿನ್ ಅವರು ಪತ್ರಕರ್ತರಿಗೆ ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್ ಗಳಾದ 7/27 307, ಐಪಿಸಿ 16,18 ಹಾಗೂ 38 (ಕಾನೂನುಬಾಹಿರಚಟುವಟಿಕೆಗಳ ತಡೆ ) ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಉಗ್ರರು ಲಷ್ಕರೆ ತಯ್ಯಬಾ ಉಗ್ರಗಾಮಿ ಸಂಘಟನೆಗೆ ಸೇರಿದವರೆಂದು ಅವರು ಹೇಳಿದ್ದಾರೆ.
ಆರೋಪಿಗಳು ಪಾಕಿಸ್ತಾನದಲ್ಲಿ ನೆಲೆಸಿರುವ ಉಗ್ರ, ಮೂಲತಃ ಪುಲ್ವಾಮಾ ನಿವಾಸಿ ಹಂಝಾ ಬುರ್ಹಾನ್ ಸೂಚನೆಯಂತೆ ಕಾರ್ಯಾಚರಿಸುತ್ತಿದ್ದರು ಎಂದು ಸ್ವೆಯಿನ್ ತಿಳಿಸಿದ್ದಾರೆ.
ಬಂಧಿತರಿಂದ ಟರ್ಕಿ ನಿರ್ಮಿತ ಪಿಸ್ತೂಲ್ ಗಳು, ಕಾಡತೂಸುಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸ್ವೆಯಿನ್ ತಿಳಿಸಿದ್ದಾರೆ.
ತಾವು ದಾಳಿ ನಡೆಸಲು ಉದ್ದೇಶಿಸಿರುವ ಪೊಲೀಸರ ಪಟ್ಟಿಯೊಂದನ್ನು ಸಿದ್ಧಪಡಿಸಿರುವುದಾಗಿಯೂ ವಿಚಾರಣೆಯ ವೇಳೆ ಉಗ್ರರು ತಿಳಿಸಿದ್ದಾರೆಂದು ಅವರು ಹೇಳಿದ್ದಾರೆ.
ಡಿಸೆಂಬರ್ 9ರಂದು ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್ ಮುಹಮ್ಮದ್ ಹಾಫಿಝ್ ತಾಕ್ ಮೇಲೆ ಶ್ರೀನಗರದ ಬೆಮಿನಾದಲ್ಲಿರುವ ಹಮದಾನಿಯಾ ಕಾಲನಿಯಲ್ಲಿ ಈ ಮೂವರು ಉಗ್ರರು ಗುಂಡುಹಾರಿಸಿದ್ದರು. ಘಟನೆಯಲ್ಲಿ ತಾಕ್ ಗಂಭೀರ ಗಾಯಗೊಂಡಿದ್ದರು.