ಮುಂಬೈಯಲ್ಲಿ 6 ಗಂಟೆಯಲ್ಲಿ 300 ಮಿ.ಮೀ. ಮಳೆ!
ರಸ್ತೆ, ರೈಲು ಸಂಚಾರ ಅಸ್ತವ್ಯಸ್ತ; 50 ವಿಮಾನಗಳ ಹಾರಾಟ ರದ್ದು
PC : PTI
ಮುಂಬೈ : ಮುಂಬೈಯಲ್ಲಿ ಸೋಮವಾರ ಭಾರೀ ಮಳೆ ಸುರಿದಿದ್ದು ನಗರದ ಹಲವು ತಗ್ಗುಪ್ರದೇಶಗಳು ಜಲಾವೃತವಾಗಿವೆ. ಇದರಿಂದಾಗಿ ರಸ್ತೆ ಸಂಚಾರ ಮತ್ತು ಉಪನಗರ ರೈಲು ಸೇವೆಗಳು ಅಸ್ತವ್ಯಸ್ತಗೊಂಡಿವೆ.
ಸೋಮವಾರ ಮುಂಜಾನೆ ಒಂದು ಗಂಟೆಯಿಂದ ಬೆಳಗ್ಗೆ 7 ಗಂಟೆವರೆಗಿನ ಆರು ಗಂಟೆಗಳ ಅವಧಿಯಲ್ಲಿ 300 ಮಿಲಿಮೀಟರ್ ಮಳೆ ಸುರಿದಿರುವುದು ಸಾಂತಾಕ್ರೂಝ್ನಲ್ಲಿರುವ ಹವಾಮಾನ ಕಚೇರಿಯಲ್ಲಿ ದಾಖಲಾಗಿದೆ ಎಂದು ಬೃಹನ್ಮುಂಬೈ ಮುನಿಸಿಪಲ್ ಕಾರ್ಪೊರೇಶನ್ (ಬಿಎಮ್ಸಿ) ತಿಳಿಸಿದೆ.
‘‘ವಿದ್ಯಾರ್ಥಿಗಳಿಗೆ ಆಗುವ ಅನಾನುಕೂಲವನ್ನು ನಿವಾರಿಸುವ ದೃಷ್ಟಿಯಿಂದ ಮುಂಬೈಯಲ್ಲಿರುವ ಎಲ್ಲಾ ಬಿಎಮ್ಸಿ ಸರಕಾರಿ ಮತ್ತು ಖಾಸಗಿ ಶಾಲೆಗಳು ಮತ್ತು ಕಾಲೇಜುಗಳಿಗೆ ಮೊದಲ ಅವಧಿಗೆ ರಜೆ ಸಾರಲಾಗಿದೆ’’ ಎಂದು ಬಿಎಮ್ಸಿ ಹೇಳಿದೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ, ವಿವಿಧ ವಿಮಾನಯಾನ ಕಂಪೆನಿಗಳ ಸುಮಾರು 50 ವಿಮಾನಗಳನ್ನು ರದ್ದುಪಡಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ದ ಹಿಂದೂ’ ವರದಿ ಮಾಡಿದೆ.
ಹಳಿಗಳಲ್ಲಿ ನೀರು ನಿಂತ ಪರಿಣಾಮವಾಗಿ ಪಶ್ಚಿಮ ರೈಲ್ವೇಯ ಮಾತುಂಗ ರಸ್ತೆ ಮತ್ತು ದಾದರ್ ನಡುವೆ ಸ್ಥಳೀಯ ರೈಲುಗಳು ವಿಳಂಬವಾಗಿ ಓಡಿವೆ.
ರಸ್ತೆಗಳಲ್ಲಿ ನೀರು ನಿಂತ ಪರಿಣಾಮವಾಗಿ ದಕ್ಷಿಣಕ್ಕೆ ಹೋಗುವ ವಿಮಾನ ನಿಲ್ದಾಣ ರಸ್ತೆ, ಕಿಂಗ್ಸ್ ಸರ್ಕಲ್, ಮಾತುಂಗ, ಕುರ್ಲಾ ಡಿಪೋ, ದಾದರ್ ಟಿಟಿ, ಹಿಂದ್ಮಾತಾ ಜಂಕ್ಷನ್, ರಾಮ್ನಗರ್ ಸಬ್ವೇ (ವಕೋಲ), ಎಸ್.ವಿ. ರೋಡ್ನಲ್ಲಿರುವ ಅಂಧೇರಿ ಸಬ್ವೇ ಮತ್ತು ವಡಾಲದಲ್ಲಿರುವ ಸಕ್ಕರ್ ಚೌಕ್ನಲ್ಲಿ ರಸ್ತೆ ಸಾರಿಗೆ ಅಸ್ತವ್ಯಸ್ತಗೊಂಡಿದೆ.