ಹೇಮಂತ್ ಸೊರೇನ್ ಗೆ ಸೇರಿದ 31 ಕೋಟಿ ರೂ. ಮೌಲ್ಯದ ಸೊತ್ತು ಈಡಿಯಿಂದ ಮುಟ್ಟುಗೋಲು
ಹೇಮಂತ್ ಸೊರೇನ್ | Photo: PTI
ರಾಂಚಿ : ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹಾಗೂ ಅವರ ಸಹಚರರ ವಿರುದ್ಧದ ಹಣ ಅಕ್ರಮ ವರ್ಗಾವಣೆ ತನಿಖೆಯ ಭಾಗವಾಗಿ ಹೇಮಂತ್ ಸೊರೇನ್ ಅವರ ಮಾಲಕತ್ವದ್ದೆಂದು ಹೇಳಲಾದ ರಾಂಚಿಯಲ್ಲಿರುವ 31 ಕೋಟಿ ರೂ. ಮೌಲ್ಯದ 8.86 ಎಕರೆ ಭೂಮಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
ಜಾರಿ ನಿರ್ದೇಶನಾಲಯ ಜೆಎಂಎಂನ ನಾಯಕರಾಗಿರುವ 48ರ ಹರೆಯದ ಹೇಮಂತ್ ಸೊರೇನ್ ಹಾಗೂ ಇತರ ನಾಲ್ವರಾದ ಭಾನು ಪ್ರತಾಪ್ ಪ್ರಸಾದ್, ರಾಜ್ ಕುಮಾರ್ ಪಹಾನ್, ಹಿಲರಿಯಾಸ್ ಕಚ್ಚಪ್ ಹಾಗೂ ಬಿನೋದ್ ಸಿಂಗ್ ವಿರುದ್ಧ ವಿಶೇಷ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ನ್ಯಾಯಾಲಯದ ಮುಂದೆ ಮಾರ್ಚ್ 30ರಂದು ಆರೋಪ ಪಟ್ಟಿ ಸಲ್ಲಿಸಿತ್ತು.
ನ್ಯಾಯಾಲಯ ಎಪ್ರಿಲ್ 4ರಂದು ಪ್ರಾಸಿಕ್ಯೂಷನ್ ದೂರನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿತ್ತು ಎಂದು ಜಾರಿ ನಿರ್ದೇಶನಾಲಯ ಹೇಳಿಕೆಯಲ್ಲಿ ತಿಳಿಸಿದೆ. ಹೇಮಂತ್ ಸೊರೇನ್ ಅವರ 8.86 ಎಕರೆ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅನುಮತಿ ನೀಡುವಂತೆ ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ಮನವಿ ಮಾಡಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಹೇಮಂತ್ ಸೊರೇನ್ ಅವರನ್ನು ರಾಂಚಿಯಲ್ಲಿರುವ ಅವರ ನಿವಾಸದಲ್ಲಿ ಜನವರಿಯಲ್ಲಿ ವಿಚಾರಣೆ ನಡೆಸಿದ ಬಳಿಕ ಬಂಧಿಸಿತ್ತು. ಬಂಧನವಾಗುವುದಕ್ಕಿಂತ ಮುನ್ನ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಪ್ರಸ್ತುತ ಅವರು ರಾಂಚಿಯ ಹೊಟ್ವಾರ್ನ ಬಿರ್ಸಾ ಮುಂಡಾ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.