ತಮಿಳುನಾಡಿನಲ್ಲಿ ಮಳೆ ಸಂಬಂಧಿ ಘಟನೆಗಳಲ್ಲಿ 31 ಮಂದಿ ಮೃತ್ಯು
ಹೊಸದಿಲ್ಲಿ: ಭಾರೀ ಮಳೆಯಿಂದಾಗಿ ತಮಿಳುನಾಡಿನ ನಾಲ್ಕು ಜಿಲ್ಲೆಗಳಲ್ಲಿ ಇದುವರೆಗೆ 31ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ತಿಳಿಸಿದ್ದಾರೆ.
ಈ ಹಣಕಾಸು ವರ್ಷದಲ್ಲಿ ಬಳಸಲು ತಮಿಳುನಾಡಿಗೆ ಕೇಂದ್ರ ಸರಕಾರ 900 ಕೋ. ರೂ. ನಿಧಿಯನ್ನು ಎರಡು ಕಂತುಗಳಲ್ಲಿ ಈಗಾಗಲೇ ಬಿಡುಗಡೆ ಮಾಡಿದೆ ಎಂದು ಅವರು ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.
ಚೆನ್ನೈಯ ಪ್ರಾದೇಶಿಕ ಹವಾಮಾನ ಇಲಾಖೆ ಮೂರು ಡಾಪ್ಲರ್ಗಳ ಜೊತೆಗೆ ಅತ್ಯಾಧುನಿಕ ಉಪಕರಣಗಳನ್ನು ಹೊಂದಿರುವ ಕುರಿತು ಮಾತನಾಡುತ್ತಿರುವ ಸಂದರ್ಭ ಸೀತಾರಾಮನ್ ಅವರು ಈ ಹೇಳಿಕೆ ನೀಡಿದರು.
ನಾಲ್ಕು ಜಿಲ್ಲೆಗಳಾದ ತೆಂಕಾಶಿ, ಕನ್ಯಾಕುಮಾರಿ, ತಿರುನಲ್ವೇಲಿ ಹಾಗೂ ತೂತ್ತುಕುಡಿಯಲ್ಲಿ ಡಿಸೆಂಬರ್ 17ರಂದು ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಡಿಸೆಂಬರ್ 12ರಂದು ಮುನ್ನೆಚ್ಚರಿಕೆ ನೀಡಿತ್ತು. ಭಾರೀ ಮಳೆಯಿಂದಾಗಿ ಈ ನಾಲ್ಕು ಜಿಲ್ಲೆಗಳು ಪ್ರವಾಹ ಪೀಡಿತವಾಗಿವೆ ಎಂದು ಸೀತಾರಾಮನ್ ತಿಳಿಸಿದ್ದಾರೆ.
Next Story