ಜಮ್ಮು-ಕಾಶ್ಮೀರದಲ್ಲಿ 32,000 ಕೋಟಿ ರೂ. ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಚಾಲನೆ
ನರೇಂದ್ರ ಮೋದಿ | Photo: PTI
ಜಮ್ಮು: ಜಮ್ಮು ಹಾಗೂ ಕಾಶ್ಮೀರದಲ್ಲಿ ಶಿಕ್ಷಣ, ರೈಲ್ವೆ, ವಾಯುಯಾನ ಹಾಗೂ ರಸ್ತೆ ವಲಯಗಳು ಸೇರಿದಂತೆ 32 ಸಾವಿರ ಕೋಟಿ ರೂಪಾಯಿಯ ಹಲವು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಚಾಲನೆ ನೀಡಿದರು.
ನೂತನವಾಗಿ ನೇಮಕರಾದ ಜಮ್ಮು ಹಾಗೂ ಕಾಶ್ಮೀರದ ಸುಮಾರು 1,500 ಉದ್ಯೋಗಿಗಳಿಗೆ ಪ್ರಧಾನಿ ಅವರು ನೇಮಕಾತಿ ಪತ್ರ ವಿತರಿಸಿದರು. ಅಲ್ಲದೆ, ‘ವಿಕಸಿತ ಭಾರತ್’, ‘ವಿಕಸಿತ ಜಮ್ಮು’ ಕಾರ್ಯಕ್ರಮದ ಭಾಗವಾಗಿರುವ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಹನ ಕೂಡ ನಡೆಸಿದರು.
ಮೋದಿ ಉದ್ಘಾಟಿಸಿದ ರೈಲ್ವೆ ಯೋಜನೆಗಳೆಂದರೆ ನಿಹಾಲ್-ಖಾರಿ -ಸುಂಬರ್-ಸಂಗಲ್ದಾನ್ (48) ನಡುವಿನ ರೈಲ್ವೆ ಲೈನ್ ಹಾಗೂ ನೂತನವಾಗಿ ವಿದ್ಯುದ್ದೀಕರಣಗೊಳಿಸಲಾದ ಬಾರಾಮುಲ್ಲಾ-ಶ್ರೀನಗರ-ಬನಿಹಾಲ್-ಸಂಗಾಲ್ದನ್ ಸೆಕ್ಷನ್ (185.66 ಕಿ.ಮೀ.).
ಅವರು ಕಣಿವೆಯಲ್ಲಿ ಮೊದಲ ಎಲೆಕ್ಟ್ರಿಕ್ ರೈಲು ಹಾಗೂ ಸಂಗಲ್ದಾನ್ ಹಾಗೂ ಬಾರಾಮುಲ್ಲಾ ನಿಲ್ದಾಣಗಳ ನಡುವೆ ರೈಲು ಸೇವೆಗೆ ಹಸಿರು ನಿಶಾನೆ ತೋರಿಸಿದರು.
ದೇಶಾದ್ಯಂತ 13,500 ಕೋಟಿ ರೂಪಾಯಿ ಮೌಲ್ಯದ ಹಲವು ಯೋಜನೆಗಳಿಗೆ ಪ್ರಧಾನಿ ಅವರು ಜಮ್ಮವಿನಿಂದ ಶಂಕು ಸ್ಥಾಪನೆ ನರೆವೇರಿಸಿದರು.
ಈ ಯೋಜನೆಗಳಲ್ಲಿ ಐಐಟಿ ಬಿಲಾಯಿ, ಐಐಟಿ, ತಿರುಪತಿ, ಐಐಟಿ ಜಮ್ಮು, ಐಐಟಿಡಿಎಂ ಕಾಂಚಿಪುರಂ, ಕಾನ್ಪುರದಲ್ಲಿರುವ ಸುಧಾರಿತ ತಂತ್ರಜ್ಞಾನದ ಕುರಿತ ಮುಂಚೂಣಿಯ ಕೌಶಲ ತರಬೇತಿ ಸಂಸ್ಥೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಕಿಲ್ಕ್ಸ್(ಐಐಎಸ್)ಗೆ ಶಾಶ್ವತ ಕ್ಯಾಂಪಸ್ ಹಾಗೂ ದೇವಪ್ರಯಾಗ್ (ಉತ್ತರಾಖಂಡ) ಹಾಗೂ ಅಗರ್ತಲ (ತ್ರಿಪುರಾ)ದಲ್ಲಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯಗಳ ಕ್ಯಾಂಪಸ್ ಗಳು ಒಳಗೊಂಡಿವೆ.
ಅವರು ದೇಶದ ನೂತನ 3 ಐಐಎಂಗಳಾದ ಐಐಎಂ ಜಮ್ಮು, ಐಐಎಂ ಬೋಧ್ ಗಯಾ ಹಾಗೂ ಐಐಎಎಂ ವಿಶಾಪಟ್ಟಣ, ದೇಶಾದ್ಯಂತ ಕೇಂದ್ರೀಯ ವಿದ್ಯಾಲಯದ 20 ನೂತನ ಕಟ್ಟಡಗಳು, ನೂತನ ಜವಾಹರ್ ನವೋದಯ ವಿದ್ಯಾಲಯದ 13 ನೂತನ ಕಟ್ಟಡಗಳನ್ನು ಉದ್ಘಾಟಿಸಿದರು.