ಗುಜರಾತ್ ಕರಾವಳಿಯಲ್ಲಿ 3,300 ಕೆಜಿ ಮಾದಕ ದ್ರವ್ಯ ವಶ
Photo: indiatoday.in
ಅಹಮದಾಬಾದ್: 3,300 ಕೆಜಿ ತೂಕದ ಮಾದಕ ದ್ರವ್ಯವನ್ನು ಹೊತ್ತು ತರುತ್ತಿದ್ದ ಪಾಕಿಸ್ತಾನಿ ಸದಸ್ಯರು ಎಂದು ಶಂಕಿಸಲಾಗಿರುವ ವ್ಯಕ್ತಿಗಳು ಚಲಾಯಿಸುತ್ತಿದ್ದ ದೋಣಿಯೊಂದನ್ನು ಭಾರತೀಯ ನೌಕಾಪಡೆ ಹಾಗೂ ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ ನೆರವಿನೊಂದಿಗೆ ಮಾದಕ ದ್ರವ್ಯ ನಿಗ್ರಹ ದಳವು ಗುಜರಾತ್ ಕರಾವಳಿಯ ಬಳಿ ವಶಕ್ಕೆ ಪಡೆದಿದೆ. ಭಾರತದ ಉಪ ಖಂಡದಲ್ಲಿ ಈವರೆಗೆ ವಶಪಡಿಸಿಕೊಂಡಿರುವ ಅತಿ ದೊಡ್ಡ ಪ್ರಮಾಣದ ಮಾದಕ ದ್ರವ್ಯ ಇದಾಗಿದೆ.
ಈ ಮಾದಕ ದ್ರವ್ಯಗಳ ಅಂತಾರಾಷ್ಟ್ರೀಯ ಮಾರುಕಟ್ಟೆ ದರವನ್ನು ರೂ. 2,000 ಕೋಟಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. ಮಾದಕ ದ್ರವ್ಯಗಳ ಚೀಲಗಳ ಮೇಲೆ ಪಾಕಿಸ್ತಾನದ ಉತ್ಪನ್ನ ಎಂದು ಬರೆಯಲಾಗಿದ್ದು, ಈ ಚೀಲಗಳಲ್ಲಿ 3,089 ಕೆಜಿ ಗಾಂಜಾ, 158 ಕೆಜಿ ಮೆಥಾಂಫೆಟೈಮ್ ಹಾಗೂ 25 ಕೆಜಿ ಮಾರ್ಫಿನ್ ಅನ್ನು ಒಳಗೊಂಡಿವೆ.
ನಿಗಾ ವಿಮಾನವು ನೀಡಿದ ಮಾಹಿತಿಯನ್ನು ಆಧರಿಸಿ ಎರಡು ದಿನಗಳಿಂದ ಸಮುದ್ರದಲ್ಲಿದ್ದ ಭಾರತೀಯ ನೌಕಾಪಡೆಯ ಹಡಗು, ಶಂಕಿತ ದೋಣಿ ಭಾರತದ ಸಮುದ್ರ ವ್ಯಾಪ್ತಿಯನ್ನು ಪ್ರವೇಶಿಸುತ್ತಿದ್ದಂತೆಯೆ ಅದನ್ನು ತಡೆದಿದೆ.
ದೋಣಿಯನ್ನು ಪರಿಶೀಲನೆಗೆ ಒಳಪಡಿಸಿದಾಗ ದೊಡ್ಡ ಪ್ರಮಾಣದ ಮಾದಕ ದ್ರವ್ಯವನ್ನು ಪ್ರಾಧಿಕಾರಗಳು ಪತ್ತೆ ಹಚ್ಚಿದ್ದು, ಈ ಸಂಬಂಧ ಐದು ಮಂದಿ ದೋಣಿಯ ಸಿಬ್ಬಂದಿಗಳನ್ನು ಬಂಧಿಸಲಾಗಿದೆ. ಇದರೊಂದಿಗೆ ದೋಣಿ ಹಾಗೂ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡಿರುವ ದೋಣಿ, ಮಾದಕ ದ್ರವ್ಯಗಳು ಹಾಗೂ ದೋಣಿಯ ಸಿಬ್ಬಂದಿಗಳನ್ನು ಗುಜರಾತ್ನ ಪೋರಬಂದರ್ಗೆ ಕರೆದೊಯ್ಯಲಾಗಿದೆ.
ಶಂಕಿತ ಪಾಕಿಸ್ತಾನಿಯರು, ಮಾದಕ ದ್ರವ್ಯಗಳ ಮೂಲ ಮತ್ತು ತಲುಪಬೇಕಿದ್ದ ಸ್ಥಳದ ಬಗ್ಗೆ ಮಾಹಿತಿ ಕಲೆ ಹಾಕಲು ತನಿಖೆ ಪ್ರಗತಿಯಲ್ಲಿದೆ.