ಮಾನವ ಕಳ್ಳ ಸಾಗಣೆ ಶಂಕೆಯಲ್ಲಿ 4 ಮಂದಿ ಏರ್ ಇಂಡಿಯಾ ಸಿಬ್ಬಂದಿಗಳು ಹಾಗೂ ಓರ್ವ ಪ್ರಯಾಣಿಕನ ಬಂಧನ
AISATS ಸಿಬ್ಬಂದಿಗಳು | Photocredi : CISF
ಹೊಸದಿಲ್ಲಿ: ಮಾನವ ಕಳ್ಳ ಸಾಗಣೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಶಂಕೆಯಲ್ಲಿ ನಾಲ್ವರು AISATS ಸಿಬ್ಬಂದಿಗಳು ಹಾಗೂ ಬ್ರಿಟನ್ ಗೆ ತೆರಳುತ್ತಿದ್ದ ಓರ್ವ ಪ್ರಯಾಣಿಕನನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿಗಳು ಬಂಧಿಸಿದ್ದಾರೆ ಎಂದು ಗುರುವಾರ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ತಿಳಿಸಿದೆ.
ತನ್ನ ಸಿಬ್ಬಂದಿಗಳನ್ನು ಅಮಾನತುಗೊಳಿಸಿದ್ದೇನೆ ಎಂದು ತಿಳಿಸಿರುವ ಕಂಪನಿಯು, ಈ ಅಪರಾಧವನ್ನು ಹೊರ ತೆಗೆಯುವ ಕಾರ್ಯಾಚರಣೆಯಲ್ಲಿ ತಾನೂ ಕೂಡಾ ಭಾಗಿಯಾಗಿದ್ದೆ ಎಂದು ಹೇಳಿದೆ.
ಬುಧವಾರ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ ವಿಮಾನದ ಮೂಲಕ ಬರ್ಮಿಂಗ್ ಹ್ಯಾಮ್ ಗೆ ತೆರಳಬೇಕಿದ್ದ ಪ್ರಯಾಣಿಕರೊಬ್ಬರ ಸಂಶಯಾಸ್ಪದ ವರ್ತನೆಯಿಂದ ಈ ಘಟನೆ ನಡೆಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭದ್ರತಾ ಸಿಬ್ಬಂದಿಗಳು ಸಿಸಿಟಿವಿ ತುಣುಕುಗಳನ್ನು ಪರಿಶೀಲಿಸಿದಾಗ, ವಲಸೆ ಅಧಿಕಾರಿಗಳು ಮೊದಲಿಗೆ ಪ್ರಯಾಣಿಕನ ಪ್ರಯಾಣ ದಾಖಲೆಗಳು ಸಂಶಯಾಸ್ಪದವಾಗಿರುವುದರಿಂದ ಸ್ಪಷ್ಟನೆಗಾಗಿ ವಿಮಾನ ಯಾನ ಅಧಿಕಾರಿಗಳೊಂದಿಗೆ ಬರುವಂತೆ ಆತನಿಗೆ ತಿಳಿಸಿ, ವಿಮಾನ ನಿಲ್ದಾಣದೊಳಗೆ ಪ್ರವೇಶಿಸಲು ಅನುಮತಿ ನಿರಾಕರಿಸಿದ್ದರು ಎಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ವಕ್ತಾರರು ತಿಳಿಸಿದ್ದಾರೆ.
ಆದರೆ, ಆ ಪ್ರಯಾಣಿಕನು ವಿಮಾನಯಾನ ಸಿಬ್ಬಂದಿಗಳನ್ನು ಸಂಪರ್ಕಿಸುವ ಬದಲು AISATS ಸಿಬ್ಬಂದಿಯನ್ನು ಸಂಪರ್ಕಿಸಿದ್ದ ಎಂದು ಅವರು ಹೇಳಿದ್ದಾರೆ.
ಪ್ರಯಾಣಿಕನು ವಿಮಾನ ಪ್ರಯಾಣ ಬೆಳೆಸಲು ಅನುವು ಮಾಡಿಕೊಡಲು AISATS ಸಿಬ್ಬಂದಿಗಳು ತಪ್ಪು ಹಾಗೂ ಅನೂರ್ಜಿತ ದಾಖಲೆಗಳನ್ನು ಪ್ರಯಾಣಿಕರ ತಪಾಸಣಾ ಕೌಂಟರ್ ನಲ್ಲಿ ಬಳಸಿರುವುದು ಕಂಡು ಬಂದಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದ್ದು, ಅವರನ್ನು ಮುಂದಿನ ಕ್ರಮಕ್ಕಾಗಿ ದಿಲ್ಲಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.