ಮಣಿಪುರ | ಸುಲಿಗೆಯ ಆರೋಪದಲ್ಲಿ ನಾಲ್ವರು ಸಶಸ್ತ್ರಧಾರಿಗಳ ಬಂಧನ
ಸಾಂದರ್ಭಿಕ ಚಿತ್ರ | PC : PTI
ಚೂರ್ಚಂದ್ಪುರ್: ಸುಲಿಗೆಯ ಆರೋಪದಲ್ಲಿ ಚೂರ್ಚಂದ್ಪುರ್ನಿಂದ ನಾಲ್ವರು ಸಶಸ್ತ್ರಧಾರಿಗಳನ್ನು ಬಂಧಿಸಲಾಗಿದೆ ಎಂದು ಶುಕ್ರವಾರ ಪೊಲೀಸರು ಹೇಳಿದ್ದಾರೆ.
ಗುರುವಾರ ರಾತ್ರಿ ಸೋಂಗ್ಪಿ ಗ್ರಾಮದ ಬಳಿ ಜಿಲ್ಲಾ ಪೊಲೀಸರು ಹಾಗೂ ಅಸ್ಸಾಂ ರೈಫಲ್ಸ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಂಧಿತರು ಸ್ಥಳೀಯರ ಬಳಿ ಹಣ ಸುಲಿಗೆ ಮಾಡಲು ಯತ್ನಿಸುತ್ತಿದ್ದರು ಎಂದೂ ಅವರು ಹೇಳಿದ್ದಾರೆ.
ಬಂಧಿತ ಆರೋಪಿಗಳನ್ನು ತುಯಿಬಾಂಗ್ ಗ್ರಾಮದ ನಿವಾಸಿ ದೌಜೈತಾಂಗ್ (42), ಮತಾ ಗ್ರಾಮದ ನಿವಾಸಿ ಕಮ್ಮಿನ್ಲಿಯನ್ (34), ಹೆಚ್ಕ್ಯೂ ವೆಂಗ್ನ ಮಸ್ಲೂಮ್ ಹಾಗೂ ಎಸ್.ತೋಲ್ಜಾಂಗ್ ಗ್ರಾಮದ ಹವೋಕಿಪ್ (27) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ವಶಪಡಿಸಿಕೊಂಡಿರುವ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳ ಪೈಕಿ ಎಂಎ1 ಎಂಕೆ1 ರೈಫಲ್, ಒಂದು ಏರ್ ಗನ್, 10 ಮ್ಯಾಗಝೀನ್ಗಳೊಂದಿಗೆ ಒಂದು ಎಕೆ ರೈಫಲ್, 7.62 ಮಿಮೀ ಎಸ್ಎಲ್ಆರ್ನೊಂದಿಗೆ ಎಂಟು ಮ್ಯಾಗಝೀನ್, ಒಂದು 5.56 ಮಿಮೀ ರೈಫಲ್ನೊಂದಿಗೆ 20 ಮ್ಯಾಗಝೀನ್ ಹಾಗೂ ಒಂದು 12 ಬೋರ್ ಗನ್ ಸೇರಿವೆ. ಇದರೊಂದಿಗೆ ನಂಬರ್ ಪ್ಲೇಟ್ ಇಲ್ಲದ ಒಂದು ಕಾರನ್ನೂ ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ, ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳು ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಚೂರ್ಚಂದ್ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.