ಮನೆಯಲ್ಲಿ ಅಗ್ನಿ ಆಕಸ್ಮಿಕ: ನಾಲ್ವರು ಸಜೀವ ದಹನ
Photo credit: indiatoday.in
ಗುರುಗ್ರಾಮ: ಮನೆಯೊಂದರಲ್ಲಿ ನಡೆದ ಅಗ್ನಿ ಆಕಸ್ಮಿಕದಲ್ಲಿ ಓರ್ವ ಬಾಲಕ ಸೇರಿದಂತೆ ನಾಲ್ವರು ಸಜೀವ ದಹನವಾಗಿರುವ ಘಟನೆ ಗುರುಗ್ರಾಮದಲ್ಲಿನ ಸರಸ್ವತಿ ಎನ್ ಕ್ಲೇವ್ ನಲ್ಲಿ ನಡೆದಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಶುಕ್ರವಾರ ರಾತ್ರಿ ನಡೆದಿದ್ದು, ಮೃತರೆಲ್ಲ ಒಂದೇ ಕೋಣೆಯಲ್ಲಿ ನಿದ್ರಿಸುತ್ತಿದ್ದರು. ಘಟನೆ ನಡೆದಾಗ ಅವರ ಕುಟುಂಬದ ಇನ್ನಿತರ ಸದಸ್ಯರು ಪಕ್ಕದ ಕೋಣೆಯಲ್ಲಿ ನಿದ್ರಿಸುತ್ತಿದ್ದರು ಎನ್ನಲಾಗಿದೆ.
ಮೃತರನ್ನು ಅಮನ್ (17), ಸಾಹಿಲ್ (22), ನೂರ್ ಅಲಂ (27) ಹಾಗೂ ಮುಹಮ್ಮದ್ ಮುಷ್ತಾಕ್ (28) ಎಂದು ಗುರುತಿಸಲಾಗಿದೆ. ಎಲ್ಲರೂ ಬಿಹಾರದ ನಿವಾಸಿಗಳಾಗಿದ್ದು, ಗುರುಗ್ರಾಮದ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಮೃತರ ಪೈಕಿ ಅಮನ್ 10ನೇ ತರಗತಿ ವಿದ್ಯಾರ್ಥಿಯಾಗಿದ್ದು, ಉಳಿದವರು ಸಿದ್ಧ ಉಡುಪು ರಫ್ತು ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಅವರು ನಿದ್ರಿಸುತ್ತಿದ್ದ ಕೋಣೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ, ಕೋಣೆ ತುಂಬಾ ಹೊಗೆ ತುಂಬಿಕೊಂಡ ಪರಿಣಾಮ, ಅವರೆಲ್ಲ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಸಂದೀಪ್ ಕುಮಾರ್ ತಿಳಿಸಿದ್ದಾರೆ.
ಆದರೆ, ಘಟನೆಯ ಬಗ್ಗೆ ತಕ್ಷಣವೇ ಮಾಹಿತಿ ನೀಡಿದರೂ, ಘಟನಾ ಸ್ಥಳದಿಂದ ಕೇವಲ 500 ಮೀಟರ್ ದೂರದಲ್ಲಿರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು ಅರ್ಧ ಗಂಟೆ ತಡವಾಗಿ ಸ್ಥಳಕ್ಕೆ ಆಗಮಿಸಿದರು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ ಗುರುಗ್ರಾಮದಲ್ಲಿನ ಬಸಾಯಿ ರಸ್ತೆಯ ಬಳಿ ಇರುವ ಮನೆಯೊಂದರಲ್ಲೂ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಈ ಘಟನೆಯಲ್ಲಿ ಇದುವರೆಗೆ ಯಾವುದೇ ಗಾಯಾಳುಗಳ ವರದಿಯಾಗಿಲ್ಲ.