ಭದ್ರತೆಗೆ ಅಪಾಯ ಎಂದು ಹೇಳಿ ಇಬ್ಬರು ಪೊಲೀಸರ ಸಹಿತ ನಾಲ್ಕು ಸರ್ಕಾರಿ ಉದ್ಯೋಗಿಗಳನ್ನು ವಜಾಗೊಳಿಸಿದ ಜಮ್ಮು ಕಾಶ್ಮೀರ ಆಡಳಿತ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಕೇಂದ್ರಾಡಳಿತ ಪ್ರದೇಶದ ಭದ್ರತೆಗೆ ಅಪಾಯವೊಡ್ಡುತ್ತಿದ್ದಾರೆಂಬ ಆರೋಪದ ಮೇಲೆ ಇಬ್ಬರು ಪೊಲೀಸರು ಸೇರಿದಂತೆ ನಾಲ್ಕು ಸರ್ಕಾರಿ ಉದ್ಯೋಗಿಗಳನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತವು ಸೇವೆಯಿಂದ ವಜಾಗೊಳಿಸಿದೆ. ಸಂವಿಧಾನದ ವಿಧಿ 311 (2) (ಸಿ) ಅನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಈ ಆದೇಶ ಹೊರಡಿಸಲಾಗಿದೆ. ಈ ವಿಧಿಯ ಅನುಸಾರ ಯಾವುದೇ ವಿಚಾರಣೆಯಿಲ್ಲದೆ ಓರ್ವ ಸರ್ಕಾರಿ ಉದ್ಯೋಗಿಯನ್ನು ಅಮಾನತುಗೊಳಿಸಬಹುದಾಗಿದೆ.
ಸೇವೆಯಿಂದ ವಜಾಗೊಂಡವರಲ್ಲಿ ಹಂದ್ವಾರದ ಹಿರಿಯ ಕಾನ್ಸ್ಟೇಬಲ್ ಮುಶ್ತಾಖ್ ಅಹ್ಮದ್ ಪೀರ್, ಗಮ್ರಾಜ್ ಗ್ರಾಮದ ಪೊಲೀಸ್ ಕಾನ್ಸ್ಟೇಬಲ್ ಇಮ್ತಿಯಾಝ್ ಅಹ್ಮದ್ ಲೋನೆ, ಉತ್ತರ ಕಾಶ್ಮೀರದ ಕುಪ್ವಾರಾದ ಖುರಾಮ ಗ್ರಾಮದಲ್ಲಿ ಶಿಕ್ಷಣ ಇಲಾಖೆಯಲ್ಲಿ ಕಿರಿಯ ಸಹಾಯಕರಾಗಿದ್ದ ಬಾಝಿಲ್ ಅಹ್ಮದ್ ಮೀರ್, ಬಾರಾಮುಲ್ಲಾ ಜಿಲ್ಲೆಯ ಉರಿ ಎಂಬಲ್ಲಿನ ಬಸ್ಗ್ರನ್ ಗ್ರಾಮದ ಗ್ರಾಮೀಣಾಭಿವೃದ್ಧಿ ಇಲಾಖೆಯ ಗ್ರಾಮ ಮಟ್ಟದ ಉದ್ಯೋಗಿ ಮೊಹಮ್ಮದ್ ಝೈದ್ ಶಾ ಸೇರಿದ್ದಾರೆ.
ಈ ನಾಲ್ಕು ಮಂದಿಯ ವಜಾದೊಂದಿಗೆ ಕಾಶ್ಮೀರ ಕಣಿವೆಯಲ್ಲಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಅಮಾನತುಗೊಂಡ ಸರ್ಕಾರಿ ಉದ್ಯೋಗಿಗಳ ಸಂಖ್ಯೆ 64ಕ್ಕೆ ಏರಿಕೆಯಾಗಿದೆ.