ಮುಂಬೈ | ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ನಾಲ್ವರು ಕಾರ್ಮಿಕರು ಮೃತ್ಯು

ಸಾಂದರ್ಭಿಕ ಚಿತ್ರ | indiatoday
ಮುಂಬೈ : ಮಹಾರಾಷ್ಟ್ರದ ನಾಗ್ಪಾಡಾದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವಾಗ ನಾಲ್ವರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರವಿವಾರ ಬೆಳಿಗ್ಗೆ 11:30ರ ಸುಮಾರಿಗೆ ಐವರು ಗುತ್ತಿಗೆ ಕಾರ್ಮಿಕರು ನಿರ್ಮಾಣ ಹಂತದಲ್ಲಿರುವ ಬಿಸ್ಮಿಲ್ಲಾ ಸ್ಪೇಸ್ ಕಟ್ಟಡದಲ್ಲಿ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದಾಗ ಉಸಿರುಗಟ್ಟಿ ಅಸ್ವಸ್ಥಗೊಂಡಿದ್ದಾರೆ. ಘಟನೆ ಬಗ್ಗೆ ಸ್ಥಳದಲ್ಲಿದ್ದ ಇತರರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಮಿಕರನ್ನು ಟ್ಯಾಂಕ್ ನಿಂದ ಮೇಲಕ್ಕೆತ್ತಿ ಸ್ಥಳೀಯ ಸರಕಾರಿ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಸ್ವಸ್ಥಗೊಂಡಿದ್ದ ಐವರು ಕಾರ್ಮಿಕರಲ್ಲಿ ನಾಲ್ವರನ್ನು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ. ಇನ್ನೋರ್ವ ಕಾರ್ಮಿಕನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.