ಸೌದಿಯಿಂದ ಆಗಮಿಸಿದ ಕಾರ್ಮಿಕನಿಂದ 4 ಲಕ್ಷ ರೂ. , ಮೊಬೈಲ್ ಅಪಹರಣ
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ವಂಚನೆ

ಸಾಂದರ್ಭಿಕ ಚಿತ್ರ | Photo : NDTV.com
ಹೊಸದಿಲ್ಲಿ: ಸೌದಿ ಅರೇಬಿಯದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ತಾಯ್ನಿಡಿಗೆ ವಾಪಸಾಗಿದ್ದ 53 ವರ್ಷದ ವ್ಯಕ್ತಿಯೊಬ್ಬರಿಂದ ಇಲ್ಲಿನ ಇಂದಿರಾಗಾಂಧಿ ಅಂತರ್ ರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಸೋಗು ಧರಿಸಿದ ಇಬ್ಬರು ಅಪರಿಚಿತರು, 4 ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ವಿದೇಶಿ ಕರೆನ್ಸಿಯನ್ನು ಅಪಹರಿಸಿದ್ದಾರೆಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ರಾಜಸ್ತಾನದ ಅಜ್ಮಿ ರ್ ನಿವಾಸಿ ಮಹಮ್ಮದ್ ಸುಲೈಮಾನ್ ರವಿವಾರ ಮುಂಜಾನೆ ಸೌದಿ ಅರೇಬಿಯದಿಂದ ದಿಲ್ಲಿಯ ಐಜಿಐಎ ವಿಮಾನನಿಲ್ದಾಣದಲ್ಲಿ ಬಂದಿಳಿದಿದ್ದರು.
ವಿಮಾನನಿಲ್ದಾಣ ದ ಹೊರಗೆ ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಸುಲೈಮಾನ್ರನ್ನು ವಾಹನ ಪಾರ್ಕಿಂಗ್ ಸ್ಥಳಕ್ಕೆ ಕರೆದುಯ್ದರು. ಅಲ್ಲಿ ಅವರು ಆತನ ಪಾಸ್ಪೋರ್ಟ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡರು. ಆನಂತರ ಅವರು ಸುಲೈಮಾನ್ ಅವರನ್ನು ಇನ್ನೋರ್ವ ವ್ಯಕ್ತಿ ಚಲಾಯಿಸುತ್ತಿದ್ದ ಕಾರಿನಲ್ಲಿ ಕುಳ್ಳಿರಿಸಿ ಮಹಿಪಾಲ್ಪುರಕ್ಕೆ ಕೊಂಡೊಯ್ದರು.
ನಿರ್ಜನ ಪ್ರದೇಶದಲ್ಲಿ ಕಾರನ್ನು ನಿಲ್ಲಿಸಿದ ಆರೋಪಿಗಳು, ಆತನಿಂದ ಮೊಬೈಲ್ ಪೋನ್ ಹಾಗೂ 19 ಸಾವಿರ ಸೌದಿ ರಿಯಾಲ್ (4.15 ಲಕ್ಷ ರೂ. ವೌಲ್ಯ) ಹಾಗೂ 2 ಸಾವಿರ ರೂ. ವೌಲ್ಯದ ಭಾರತೀಯ ಕರೆನ್ಸಿ ನೋಟುಗಳನ್ನು ಕಸಿದುಕೊಂಡರು. ಎಲ್ಲಿಂದ ಮೊಬೈಲ್ ಫೋನ್ ಹಾಗೂ ವಿದೇಶಿ ಕರೆನ್ಸಿ ನಿನಗೆ ದೊರೆಯಿತೆಂದು ಅವರು ಆತನನ್ನು ಪ್ರಶ್ನಿಸುವ ನಾಟಕವಾಡಿದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಆನಂತರ ವ್ಯಕ್ತಿಯನ್ನು ಕಾರಿನಿಂದ ಇಳಿಯುವಂತೆ ಹೇಳಿದರು . ತಮ್ಮ ಹಿರಿಯ ಅಧಿಕಾರಿಯೊಂದಿಗೆ ಮತ್ತೆ ವಾಪಸಾಗುವುದಾಗಿ ಹೇಳಿಆ ಆರೋಪಿಗಳು ಕಾರಿನಲ್ಲಿ ತೆರಳಿದರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಭಾರತೀಯ ದಂಡಸಂಹಿತೆಯ ಸೆಕ್ಷನ್ 120ರಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.