ಮುಂಬೈ| ನಾಲ್ಕು ಅಂತಸ್ತಿನ ಕಟ್ಟಡ ಕುಸಿತ: ಇಬ್ಬರ ರಕ್ಷಣೆ, ಅವಶೇಷಗಳಡಿಯಲ್ಲಿ ಇನ್ನೂ ಮೂವರು ಸಿಲುಕಿಕೊಂಡಿರುವ ಶಂಕೆ
Photo: PTI
ಮುಂಬೈ: ಶನಿವಾರ ಮುಂಜಾನೆ ನಾಲ್ಕು ಅಂತಸ್ತಿನ ಕಟ್ಟಡವೊಂದು ಕುಸಿದಿರುವ ಘಟನೆ ನವಿ ಮುಂಬೈನ ಸಿಬಿಡಿ ಬೇಲಾಪುರ್ ನಲ್ಲಿ ನಡೆದಿದ್ದು, ಈ ಘಟನೆಯಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ. ಕಟ್ಟಡದ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿರುವ ಇನ್ನೂ ಮೂವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಈ ಘಟನೆಯು ಇಂದು ಮುಂಜಾನೆ 4.10ಕ್ಕೆ ಶಹ್ಬಾಝ್ ಗ್ರಾಮದಲ್ಲಿ ನಡೆದಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ನವಿ ಮುಂಬೈ ಮಹಾನಗರ ಪಾಲಿಕೆಯ ಆಯುಕ್ತ ಕೈಲಾಸ್ ಶಿಂದೆ, “ಇಂದು ಬೆಳಗ್ಗೆ ಹಲವು ವಸತಿ ಗೃಹಗಳು ಹಾಗೂ ಮೂರು ಮಳಿಗೆಗಳನ್ನು ಹೊಂದಿದ್ದ ನಾಲ್ಕು ಅಂತಸ್ತಿನ ಕಟ್ಟಡವು ಕುಸಿದು ಬಿದ್ದಿದೆ. ಈ ಘಟನೆಯಲ್ಲಿ 13 ಮಕ್ಕಳು ಸೇರಿದಂತೆ 52 ನಿವಾಸಿಗಳನ್ನು ತೆರವುಗೊಳಿಸಲಾಗಿದೆ. ಕಟ್ಟಡದ ಅವಶೇಷಗಳಡಿ ಸಿಲುಕಿಕೊಂಡಿದ್ದ ಓರ್ವ ಮಹಿಳೆ ಹಾಗೂ ಓರ್ವ ಪುರುಷನನ್ನು ರಕ್ಷಿಸಲಾಗಿದ್ದು, ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇನ್ನೂ ಮೂವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ” ಎಂದು ತಿಳಿಸಿದ್ದಾರೆ.
ಕುಸಿದು ಬಿದ್ದಿರುವ ಕಟ್ಟಡವನ್ನು ಕೇವಲ 10 ವರ್ಷಗಳ ಹಿಂದಷ್ಟೆ ನಿರ್ಮಿಸಲಾಗಿತ್ತು ಎಂದೂ ಅವರು ಹೇಳಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ಮಹಾನಗರ ಪಾಲಿಕೆಯ ಅಗ್ನಿಶಾಮಕ ದಳದ ಸಿಬ್ಬಂದಿಗಳು ಇಬ್ಬರನ್ನು ರಕ್ಷಿಸಿದ್ದು, ಉಳಿದವರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಘಟನೆಯಲ್ಲಿ ರಕ್ಷಿಸಲಾಗಿರುವವರನ್ನು ಲಾಲ್ ಮುಹಮ್ಮದ್ (22) ಹಾಗೂ ರುಖ್ಸಾನಾ (21) ಎಂದು ಗುರುತಿಸಲಾಗಿದೆ. ಉಳಿದವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಗೆ ನೆರವು ನೀಡಲು ಶ್ವಾಶನದಳವನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ.
ಕಟ್ಟಡ ಕುಸಿತದ ಕಾರಣದ ಕುರಿತು ನವಿ ಮುಂಬೈ ಮಹಾನಗರ ಪಾಲಿಕೆ ವತಿಯಿಂದ ತನಿಖೆ ಕೈಗೊಳ್ಳಲಾಗುವುದು ಎಂದು ಆಯುಕ್ತ ಕೈಲಾಸ್ ಶಿಂದೆ ತಿಳಿಸಿದ್ದಾರೆ.