ವಕ್ಫ್ ಕಾಯ್ದೆಗೆ 40 ತಿದ್ದುಪಡಿಗಳು | ಆಗಸ್ಟ್ 8ರಂದು ಸಂಸತ್ತಿನಲ್ಲಿ ಮಂಡನೆ ಸಾಧ್ಯತೆ
ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ : ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆ 3ನೇ ಅವಧಿಯ ಎನ್ಡಿಎ ಸರಕಾರ ವಕ್ಫ್ ಕಾಯ್ದೆ, 1995ಕ್ಕೆ 40 ತಿದ್ದುಪಡಿಗಳನ್ನು ಪ್ರಸ್ತಾವಿಸುವ ಮಸೂದೆಯನ್ನು ಸಂಸತ್ತಿನಲ್ಲಿ ಆಗಸ್ಟ್ 8ರಂದು ಮಂಡಿಸುವ ಸಾಧ್ಯತೆ ಇದೆ.
ಮುಸ್ಲಿಮರ ಧಾರ್ಮಿಕ ಉದ್ದೇಶಗಳಿಗಾಗಿ ದೇಣಿಗೆ ನೀಡುವ ಸೊತ್ತುಗಳನ್ನು ನಿರ್ವಹಿಸುವ ವಕ್ಫ್ ಮಂಡಳಿಗಳಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಹಾಗೂ ಲಿಂಗತ್ವದ ಪ್ರತಿನಿಧೀಕರಣಕ್ಕೆ ಪ್ರಾಮುಖ್ಯತೆ ನೀಡುವ ಪ್ರಸ್ತಾವವನ್ನು ಈ ತಿದ್ದುಪಡಿ ಹೊಂದಿದೆ ಎಂದು ಹೇಳಲಾಗುತ್ತಿದೆ.
ಈ ಮಸೂದೆ ಆಗಸ್ಟ್ 8ರಂದು ಮಂಡನೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಕೆಲವು ಕಾರಣಕ್ಕಾಗಿ ಅಂದು ಮಂಡನೆಯಾಗದೇ ಇದ್ದರೆ, ಈ ವಾರದ ಅಂತ್ಯದಲ್ಲಿ ಮಂಡನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತಾವಿತ ತಿದ್ದುಪಡಿಗಳು ವಕ್ಫ್ ಸೊತ್ತುಗಳ ಹೆಚ್ಚು ಪರಿಣಾಮಕಾರಿ ಮೇಲ್ವಿಚಾರಣೆ ಹಾಗೂ ನಿರ್ವಹಣೆಯ ಖಾತರಿ ನೀಡುವ ನಿಬಂಧನೆಗಳನ್ನು ಒಳಗೊಂಡಿರಲಿದೆ ಎಂದು ನಿರೀಕ್ಷಿಸಲಾಗಿದೆ. ವಕ್ಫ್ ಆಸ್ತಿಗೆಗಳ ಬಳಕೆಯಲ್ಲಿ ಪಾರದರ್ಶಕತೆ ಹೆಚ್ಚಿಸುವುದು ಹಾಗೂ ಕಠಿಣ ಉತ್ತರದಾಯಿ ಕ್ರಮಗಳನ್ನು ಪರಿಚಯಿಸುವುದು ಈ ಮಸೂದೆಯ ಒಂದು ಪ್ರಮುಖ ಅಂಶ ಎಂದು ಸರಕಾರದ ಮೂಲಗಳು ತಿಳಿಸಿವೆ.
ಇದಲ್ಲದೆ, ಲಿಂಗ ಸಮಾನತೆಯನ್ನು ಉತ್ತೇಜಿಸುವ ವ್ಯಾಪಕ ಪ್ರಯತ್ನದೊಂದಿಗೆ ವಕ್ಫ್ ಮಂಡಳಿಗಳಲ್ಲಿ ಮಹಿಳೆಯರ ಪ್ರತಿನಿಧೀಕರಣವನ್ನು ಹೆಚ್ಚಿಸಲು ಈ ಮಸೂದೆ ಕೋರಲಿದೆ.