ಗುಜರಾತ್ | 5 ವರ್ಷದೊಳಗಿನ ಶೇ.39.7ರಷ್ಟು ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ : ನೀತಿ ಆಯೋಗ
ಸಾಂದರ್ಭಿಕ ಚಿತ್ರ Photo: PTI
ಅಹ್ಮದಾಬಾದ್ : ದೇಶದಲ್ಲಿ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಿರುವ ರಾಜ್ಯಗಳಲ್ಲಿ ಒಂದಾಗಿರುವ ಗುಜರಾತ್ ಮಕ್ಕಳಲ್ಲಿ ಹಸಿವಿನ ವಿರುದ್ಧ ಹೋರಾಡುವಲ್ಲಿ ಮತ್ತು ಪೌಷ್ಟಿಕಾಂಶವನ್ನು ಹೆಚ್ಚಿಸುವಲ್ಲಿ ಕೆಳಗಿನ ಸ್ಥಾನದಲ್ಲಿದೆ ಎಂದು ನೀತಿ ಆಯೋಗವು ಬಿಡುಗಡೆಗೊಳಿಸಿರುವ ದತ್ತಾಂಶಗಳು ಬೆಟ್ಟು ಮಾಡಿವೆ.
ಹಸಿವು ಸೂಚ್ಯಂಕದಲ್ಲಿ ಗುಜರಾತ್ ಭಾರತೀಯ ರಾಜ್ಯಗಳ ಪೈಕಿ 25ನೇ ಸ್ಥಾನದಲ್ಲಿದೆ ಎಂದು ನೀತಿ ಆಯೋಗವು ಈ ತಿಂಗಳ ಆರಂಭದಲ್ಲಿ ಬಿಡುಗಡೆಗೊಳಿಸಿರುವ 2023-24 ಸುಸ್ಥಿರ ಅಭಿವೃದ್ಧಿ ಗುರಿ (ಎಸ್ಡಿಜಿ) ವರದಿಯು ಹೇಳಿದೆ. ಗುಜರಾತಿನಲ್ಲಿ ಐದು ವರ್ಷದೊಳಗಿನ ಶೇ.39.7ರಷ್ಟು ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ ಎಂದೂ ನೀತಿ ಆಯೋಗದ ವರದಿಯು ಬಹಿರಂಗಗೊಳಿಸಿದೆ.
ಎಸ್ಡಿಜಿ 2 ಶೂನ್ಯ ಹಸಿವನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಇದು 2015ರಲ್ಲಿ ವಿಶ್ವಸಂಸ್ಥೆಯು ಸ್ಥಾಪಿಸಿದ 17 ಎಸ್ಡಿಜಿಗಳಲ್ಲಿ ಒಂದಾಗಿದೆ.
ಎಸ್ಡಿಜಿ 2 ಸೂಚ್ಯಂಕದಲ್ಲಿ ಕೇವಲ 41 ಅಂಕಗಳನ್ನು ಗಳಿಸಿರುವ ಗುಜರಾತ್ ಹಸಿವಿನ ವಿರುದ್ಧ ಹೋರಾಟದಲ್ಲಿ ಒಡಿಶಾ, ಮಧ್ಯಪ್ರದೇಶ ಮತ್ತು ಇತರ 22 ರಾಜ್ಯಗಳಿಗಿಂತ ಹಿಂದುಳಿದಿದೆ. ಗುಜರಾತಿಗಾಗಿ ಎಸ್ಡಿಜಿ ಸೂಚ್ಯಂಕ 2018ರಲ್ಲಿ 49,2019-20ರಲ್ಲಿ 41 ಮತ್ತು 2020-21ರಲ್ಲಿ 46 ಆಗಿದ್ದು,ಇದು ಎಸ್ಡಿಜಿ 2 ಸಾಧನೆಯಲ್ಲಿ ನಿರಂತರ ಕುಸಿತವನ್ನು ಸೂಚಿಸಿದೆ.
ರಾಜ್ಯದಲ್ಲಿ ಐದು ವರ್ಷಕ್ಕಿಂತ ಕೆಳಗಿನ ಶೇ.39ರಷ್ಟು ಮಕ್ಕಳು ಕುಬ್ಜತೆ ಮತ್ತು 15ರಿಂದ 49 ವರ್ಷ ವಯೋಮಾನದ ಶೇ.62.5ರಷ್ಟು ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಹಾಗೂ ಇದೇ ವಯೋಗುಂಪಿನ ಶೇ.25.2ರಷ್ಟು ಮಹಿಳೆಯರು 18.5ಕ್ಕಿಂತ ಕಡಿಮೆ ಬಾಡಿ ಮಾಸ್ ಇಂಡೆಕ್ಸ್ (ಎತ್ತರಕ್ಕೆ ಅನುಗುಣವಾಗಿ ದೇಹತೂಕ ಸೂಚಿ) ಹೊಂದಿದ್ದಾರೆ ಎನ್ನುವುದನ್ನು ನೀತಿ ಆಯೋಗದ ದತ್ತಾಂಶಗಳು ತೋರಿಸಿವೆ. 2018 ಮತ್ತು 2019ಕ್ಕೆ ಹೋಲಿಸಿದರೆ ಕಡಿಮೆ ತೂಕ ಮತ್ತು ಕುಬ್ಜತೆಯನ್ನು ಹೊಂದಿರುವ ಮಕ್ಕಳು ಮತ್ತು ರಕ್ತಹೀನತೆಯಿಂದ ಬಳಲುತ್ತಿರುವ ಮಹಿಳೆಯರ ಸಂಖ್ಯೆಯಲ್ಲಿ ಏರಿಕೆಯಾಗಿದೆ.
ಗುಜರಾತಿನ ಎಸ್ಡಿಜಿ-2 ಸೂಚ್ಯಂಕವು 2020-21ರಲ್ಲಿದ್ದ 46ರಿಂದ 2023-24ರಲ್ಲಿ 41ಕ್ಕೆ ಕುಸಿದಿದೆ ಮತ್ತು ಶೇ.39.7ರಷ್ಟು ಮಕ್ಕಳು ಕಡಿಮೆ ತೂಕವನ್ನು ಹೊಂದಿದ್ದಾರೆ ಹಾಗೂ ಶೇ.62.5ರಷ್ಟು ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇದು 2030ರ ವೇಳೆಗೆ ಶೂನ್ಯ ಹಸಿವಿನ ಗುರಿಯನ್ನು ಸಾಧಿಸಲು ಪೋಷಕಾಂಶ ಕೇಂದ್ರೀಕೃತ ಉಪಕ್ರಮಗಳಲ್ಲಿ ತುರ್ತು ಮತ್ತು ಸಾಕಷ್ಟು ಹೂಡಿಕೆಯನ್ನು ಅಗತ್ಯವಾಗಿಸಿದೆ ಎಂದು ಅಹ್ಮದಾಬಾದ್ನ ಸೈಂಟ್ ಝೇವಿಯರ್ಸ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಮನ್ ಶಾ ಹೇಳಿದರು.
ಗ್ರಾಮೀಣ ಗುಜರಾತಿನ ಶೇ.44.45ರಷ್ಟು ಮತ್ತು ನಗರ ಪ್ರದೇಶಗಳ ಶೇ.28.97ರಷ್ಟು ಜನರು ಪೌಷ್ಟಿಕಾಂಶಗಳಿಂದ ವಂಚಿತರಾಗಿದ್ದಾರೆ ಎನ್ನುವುದನ್ನು 2023 ಎಂಪಿಐ (ಬಹುಆಯಾಮ ಬಡತನ ಸೂಚ್ಯಂಕ) ವರದಿಯು ಹೇಳಿದೆ.