ಅಣ್ಣನ ಹತ್ಯೆ: 40 ವರ್ಷ ಬಳಿಕ 80ರ ವೃದ್ಧನಿಗೆ ಜೀವಾವಧಿ ಶಿಕ್ಷೆ
ಆಗ್ರಾ: ಭೂ ವಿವಾದಲ್ಲಿ ತನ್ನ ಅಣ್ಣನನ್ನೇ ಹತ್ಯೆ ಮಾಡಿದ ಆರೋಪದಲ್ಲಿ ಘಟನೆ ನಡೆದು 40 ವರ್ಷಗಳ ಬಳಿಕ, 80 ವರ್ಷದ ವೃದ್ಧನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಮನೋಜ್ ಕುಮಾರ್ ಅಗರ್‍ವಾಲ್ ತೀರ್ಪು ನೀಡಿದ್ದಾರೆ. ಜೈಪಾಲ್ ಸಿಂಗ್ ಎಂಬಾತನಿಗೆ ನ್ಯಾಯಾಲಯ 20 ಸಾವಿರ ರೂಪಾಯಿ ದಂಡವನ್ನೂ ವಿಧಿಸಿದೆ.
1983ರಲ್ಲಿ ನಡೆದ ಈ ಅಪರಾಧ ಪ್ರಕರಣದ ವಿಚಾರಣೆ 39 ವರ್ಷ ಹಿಂದೆ ಆರಂಭವಾಗಿತ್ತು. ಹತ್ಯೆ ಆರೋಪದಲ್ಲಿ ಜೈಸ್ವಾಲ್‍ನನ್ನು ಬಂಧಿಸಲಾಗಿತ್ತು. ಬಳಿಕ ಕೆಲ ತಿಂಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಇದಕ್ಕೆ ಅಲಹಾಬಾದ್ ಹೈಕೋರ್ಟ್ ತಡೆಯಾಜ್ಞೆ ವಿಧಿಸಿತ್ತು. ಹಲವು ದಶಕಗಳ ಕಾಲ ಕಾದ ಬಳಿಕ ಸಂತ್ರಸ್ತ ರಘುನಾಥ್ ಸಿಂಗ್ ಅವರ ಪತ್ನಿ ಹಾಗೂ ಅರ್ಜಿದಾರರಾದ ಚಂದ್ರಮುಖಿ (75) ಕಳೆದ ಜೂನ್‍ನಲ್ಲಿ ಹೈಕೋರ್ಟ್‍ಗೆ ಮನವಿ ಸಲ್ಲಿಸಿ, ಪ್ರಕರಣದ ಬಗ್ಗೆ ತ್ವರಿತ ವಿಚಾರಣೆ ನಡೆಸಲು ಆದೇಶಿಸಬೇಕು ಎಂದು ಕೋರಿದ್ದರು.
"ಕನಿಷ್ಠ 17 ಸಾಕ್ಷಿಗಳಿದ್ದರು. ಚಂದ್ರಮುಖಿ 1984ರಲ್ಲೇ ತಮ್ಮ ಸಾಕ್ಷ್ಯ ನೀಡಿದ್ದರು. ಕೆಲ ಸಾಕ್ಷಿಗಳು ಮೃತಪಟ್ಟಿರುವುದರಿಂದ ಹಾಗೂ ಕೆಲವರು ಹಾಜರಾಗದೇ ಇದ್ದ ಕಾರಣ, ಪ್ರಕರಣ ನನೆಗುದಿಗೆ ಬಿದ್ದಿತ್ತು. ಐದು ಸಾಕ್ಷಿಗಳು ಹಾಗೂ ಇತರ ಪುರಾವೆಯನ್ನು ಆಧರಿಸಿ ಸೋಮವಾರ ನ್ಯಾಯಾಲಯ ತೀರ್ಪು ನೀಡಿದೆ" ಎಂದು ಹೆಚ್ಚುವರಿ ಜಿಲ್ಲಾ ಸರ್ಕಾರಿ ಅಭಿಯೋಜಕ ಜೆ.ಪಿ.ರಜಪೂತ್ ಹೇಳಿದ್ದಾರೆ.
"ತನ್ನ ಅಣ್ಣನ ಕೃಷಿಭೂಮಿಯನ್ನು ಕಬಳಿಸುವ ಹುನ್ನಾರದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವ್ಯಾಜ್ಯ ಇತ್ತು. 1983ರ ಜೂನ್ 3ರಂದು ರಘುನಾಥ್ ಮನೆಗೆ ಮರಳುತ್ತಿದ್ದಾಗ ಜೈಪಾಲ್ ಬಡಿಗೆಯಿಂದ ಹಲ್ಲೆ ನಡೆಸಿದ್ದ. ತೀವ್ರಗಾಯಗೊಂಡಿದ್ದ ರಘುನಾಥ್ ಮರುದಿನ ಅಲೀಗಢದ ಜೆ.ಎನ್.ಮೆಡಿಕಲ್ ಕಾಲೇಜಿನಲ್ಲಿ ಮೃತಪಟ್ಟಿದ್ದರು ಎಂದು ಅಭಿಯೋಜಕರು ವಿವರ ನೀಡಿದ್ದಾರೆ.