ಗ್ರಾಹಕರಿಂದ ಸಂಗ್ರಹಿಸಿದ ಡೆಲಿವರಿ ಶುಲ್ಕಕ್ಕೆ 402 ಕೋಟಿ ರೂ. ಜಿಎಸ್‌ಟಿ ಪಾವತಿಸುವಂತೆ ಝೊಮ್ಯಾಟೋಗೆ ನೋಟಿಸ್
ಹೊಸದಿಲ್ಲಿ: ಜನಪ್ರಿಯ ಆನ್‌ಲೈನ್ ಆಹಾರ ಡೆಲಿವರಿ ಪ್ಲಾಟ್‌ಫಾರ್ಮ್ ಆಗಿರುವ ಝೊಮ್ಯಾಟೋ ಗೆ ರೂ 402 ಕೋಟಿ ಜಿಎಸ್‌ಟಿ ಪಾವತಿಸದೇ ಇರುವ ಕುರಿತಂತೆ ಜಿಎಸ್‌ಟಿ ಪ್ರಾಧಿಕಾರವು ನೋಟಿಸ್ ಜಾರಿಗೊಳಿಸಿದೆ. ಅಕ್ಟೋಬರ್ 2019ರಿಂದ ಮಾರ್ಚ್ 31, 2022ರವರೆಗಿನ ಜಿಎಸ್‌ಟಿ ಇದೆಂದು ಹೇಳಲಾಗಿದೆ. ಝೊಮ್ಯಾಟೋ ತನ್ನ ಗ್ರಾಹಕರಿಂದ ಸಂಗ್ರಹಿಸುವ ಡೆಲಿವರಿ ಶುಲ್ಕಗಳಿಗೆ ಜಿಎಸ್‌ಟಿ ಪಾವತಿಸಬೇಕೆಂದು ಕೇಂದ್ರ ಸರ್ಕಾರ ಹೇಳುತ್ತಿದೆ.
ವರದಿಗಳ ಪ್ರಕಾರ ಜಿಎಸ್‌ಟಿ ಇಂಟಲಿಜೆನ್ಸ್‌ನ ಮಹಾನಿರ್ದೇಶನಾಲಯವು ಝೊಮ್ಯಾಟೋ ಮತ್ತು ಸ್ವಿಗ್ಗಿಗೆ ನವೆಂಬರ್ ತಿಂಗಳಿನಲ್ಲಿಯೇ ನೋಟಿಸ್ ಜಾರಿಗೊಳಿಸಿ ಜಿಎಸ್‌ಟಿ ಕುರಿತಂತೆ ರೂ 750 ಕೋಟಿ ಪಾವತಿಸುವಂತೆ ಸೂಚಿಸಿತ್ತು.
ಆದರೆ ತಾನು ಜಿಎಸ್‌ಟಿ ಪಾವತಿಸುವ ಅಗತ್ಯವಿಲ್ಲ ಎಂದು ಝೊಮ್ಯಾಟೋ ಹೇಳಿಕೊಂಡಿದೆಯಲ್ಲದೆ ಡೆಲಿವರಿ ಪಾರ್ಟ್‌ನರ್‌ಗಳ ಪರವಾಗಿ ತಾನು ಶುಲ್ಕ ಮಾತ್ರ ಸಂಗ್ರಹಿಸುತ್ತಿರುವುದಾಗಿ ತಿಳಿಸಿದೆ.
ಡೆಲಿವರಿ ಪಾರ್ಟ್‌ನರ್‌ಗಳು ಗ್ರಾಹಕರಿಗೆ ನೇರ ಸೇವಾ ಪೂರೈಕೆದಾರರಾಗಿರುವುದರಿಂದ ಜಿಎಸ್‌ಟಿ ಪಾವತಿಸುವ ಹೊಣೆಗಾರಿಕೆ ತನ್ನ ಮೇಲೆ ಬರುವುದಿಲ್ಲ ಎಂಬ ವಾದ ಝೊಮ್ಯಾಟೋದ್ದಾಗಿದೆ.
ಕೇಂದ್ರದ ನಿಯಮದ ಪ್ರಕಾರ ಜನವರಿ 1, 2022ರಿಂದ ಆಹಾರ ಡೆಲಿವರಿ ಪ್ಲಾಟ್‌ಫಾರ್ಮ್‌ಗಳು ರೆಸ್ಟೋರೆಂಟ್‌ಗಳ ಪರವಾಗಿ ಜಿಎಸ್‌ಟಿ ಸಂಗ್ರಹಿಸಿ ಪಾವತಿಸಬೇಕಿದೆ. ಆದರೆ ಡೆಲಿವರಿ ಫೀಸ್ ಮೇಲಿನ ಜಿಎಸ್‌ಟಿ ಕುರಿತಾದ ಸ್ಪಷ್ಟವಾದ ಮಾರ್ಗಸೂಚಿ ಇನ್ನೂ ಇಲ್ಲದೇ ಇರುವುದರಿಂದ ಸಮಸ್ಯೆ ಕ್ಲಿಷ್ಟಕರವಾಗಿದೆ.
ಸದ್ಯ ಝೊಮ್ಯಾಟೋ ಮತ್ತು ಸ್ವಿಗ್ಗಿ ಈ ಎರಡೂ ಸಂಸ್ಥೆಗಳು ಕಾನೂನು ಮತ್ತು ತೆರಿಗೆ ತಜ್ಞರ ಸಲಹೆಯನ್ನು ಪಡೆಯುತ್ತಿವೆ. ಅವುಗಳು ಸರ್ಕಾರವನ್ನೂ ಸಂಪರ್ಕಿಸಿ ಜಿಎಸ್‌ಟಿ ಕುರಿತು ಸ್ಪಷ್ಟನೆ ಕೇಳುವ ಸಾಧ್ಯತೆಯಿದೆ.