ರಾಜತಾಂತ್ರಿಕ ಸಂಘರ್ಷ: ಭಾರತದಿಂದ 41 ರಾಜತಾಂತ್ರಿಕರು ಕೆನಡಾಗೆ ವಾಪಸ್ಸು
ಹೊಸದಿಲ್ಲಿ: ಸಿಖ್ ಪ್ರತ್ಯೇಕತಾವಾದಿ ನಾಯಕನ ಹತ್ಯೆ ಹಿನ್ನೆಲೆಯಲ್ಲಿ ಭಾರತ ಹಾಗೂ ಕೆನಡಾ ನಡುವೆ ಉದ್ಭವಿಸಿರುವ ರಾಜತಾಂತ್ರಿಕ ಸಂಘರ್ಷ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕನಿಷ್ಠ 41 ಮಂದಿ ಕೆನಡಿಯನ್ ರಾಜತಾಂತ್ರಿಕರನ್ನು ವಾಪಾಸು ಕರೆಸಿಕೊಳ್ಳಲಾಗಿದೆ ಎಂದು ಅಲ್ಲಿನ ವಿದೇಶಾಂಗ ಸಚಿವ ಮೆಲೈನ್ ಜೋಲಿ ಪ್ರಕಟಿಸಿದ್ದಾರೆ.
ರಾಜತಾಂತ್ರಿಕರ ಅಧಿಕೃತ ಸ್ಥಾನಮಾಣವನ್ನು ರದ್ದುಪಡಿಸಿರುವ ಭಾರತದ ಕ್ರಮ ಅತಾರ್ಕಿಕ ಹಾಗೂ ಹಿಂದೆಂದೂ ಕಂಡರಿಯದ ಕ್ರಮ ಎಂದು ಅವರು ಹೇಳಿದ್ದಾರೆ. ಜತೆಗೆ ಇದು ರಾಜತಾಂತ್ರಿಕ ಸಂಬಂಧಗಳ ಕುರಿತ ವಿಯೆನ್ನಾ ಒಪ್ಪಂದದ ಸ್ಪಷ್ಟ ಉಲ್ಲಂಘನೆ ಎಂದು ಅಭಿಪ್ರಾಯಪಟ್ಟಿದ್ದಾರೆ.
"ಭಾರತದ ಈ ಕ್ರಮ ನಮ್ಮ ರಾಜತಾಂತ್ರಿಕ ಸಿಬ್ಬಂದಿಯ ಸುರಕ್ಷತೆಯ ಮೇಲೆ ಪರಿಣಾಮ ಬೀರುವ ಹಿನ್ನೆಲೆಯಲ್ಲಿ, ಅವರು ಭಾರತದಿಂದ ಸುರಕ್ಷಿತವಾಗಿ ವಾಪಸ್ಸಾಗಲು ಅಗತ್ಯ ಸೌಲಭ್ಯಗಳನ್ನು ಒದಗಿಸಿದ್ದೇವೆ" ಎಂದು ಅವರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
"ರಾಜತಾಂತ್ರಿಕ ವಿಶೇಷ ಹಕ್ಕುಗಳ ರೂಢಿ ತಪ್ಪಲು ನಾವು ಅವಕಾಶ ಮಾಡಿಕೊಟ್ಟರೆ, ಭೂಮಂಡಲದ ಯಾವ ರಾಜತಾಂತ್ರಿಕರೂ ಸುರಕ್ಷಿತವಲ್ಲ. ಈ ಕಾರಣದಿಂದ ನಾವು ಪ್ರತಿಯಾಗಿ ಕ್ಮ ಕೈಗೊಂಡಿಲ್ಲ. 41 ಮಂದಿ ರಾಜತಾಂತ್ರಿಕರು 42 ಅವಲಂಬಿತರನ್ನು ಹೊಂದಿದ್ದರು ಎಂದು ವಿವರಿಸಿದ್ದರೆ.
ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆ ಹಿಂದೆ ಭಾರತೀಯ ಏಜೆಂಟ್ಗಳ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜೆಸ್ಟಿನ್ ಟ್ರುದೇವ್ ಆಪಾಧಿಸಿದ ಹಿನ್ನೆಲೆಯಲ್ಲಿ ಉದ್ಭವಿಸಿದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಕಳೆದ ತಿಂಗಳ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತದಲ್ಲಿರುವ ಕೆನಡಾ ರಾಜತಾಂತ್ರಿಕ ಸಿಬ್ಬಂದಿಯನ್ನು ಕಡಿತಗೊಳಿಸುವಂತೆ ಸೂಚನೆ ನೀಡಿತ್ತು.