450 ಕೋ.ರೂ.ಚಿಟ್ಫಂಡ್ ಹಗರಣ| ಶುಭಮನ್ ಗಿಲ್ ಸೇರಿದಂತೆ ಗುಜರಾತ್ ಟೈಟನ್ಸ್ನ ನಾಲ್ವರು ಆಟಗಾರರಿಗೆ ಸಿಐಡಿಯಿಂದ ಸಮನ್ಸ್ ಸಾಧ್ಯತೆ
ಶುಭಮನ್ ಗಿಲ್ | PTI
ಅಹ್ಮದಾಬಾದ್ : ಗುಜರಾತ್ ಸಿಐಡಿ ಕ್ರೈಂ ಬ್ರ್ಯಾಂಚ್ 450 ಕೋ.ರೂ.ಗಳ ಚಿಟ್ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಭಾರತದ ಅಂತರರಾಷ್ಟ್ರೀಯ ಕ್ರಿಕೆಟಿಗ ಶುಭಮನ್ ಗಿಲ್ ಸೇರಿದಂತೆ ಗುಜರಾತ್ ಟೈಟನ್ಸ್ನ ನಾಲ್ವರು ಆಟಗಾರರಿಗೆ ಸಮನ್ಸ್ ಹೊರಡಿಸುವ ನೀರಿಕ್ಷೆಯಿದೆ ಎಂದು ವರದಿಗಳು ತಿಳಿಸಿವೆ. ಗಿಲ್ ಜೊತೆಗೆ ಇತರ ಕ್ರಿಕೆಟಿಗರಾದ ಸಾಯಿ ಸುದರ್ಶನ, ರಾಹುಲ್ ತೆವಾಟಿಯಾ ಮತ್ತು ಮೋಹಿತ ಶರ್ಮಾ ಅವರನ್ನು ಸಿಐಡಿ ಪೋಲಿಸರು ಪ್ರಶ್ನಿಸುವ ಸಾಧ್ಯತೆಯಿದೆ.
ಈ ಪೊಂಝಿ ಯೋಜನೆಯ ಮಾಸ್ಟರ್ ಮೈಂಡ್ ಎನ್ನಲಾಗಿರುವ ಭೂಪೇಂದ್ರ ಸಿನ್ಹ ಝಲಾ ಎಂಬಾತನ ವಿಚಾರಣೆಯ ಬಳಿಕ ಕ್ರಿಕೆಟಿಗರಿಗೆ ಸಮನ್ಸ್ ಜಾರಿಗೊಳಿಸಲು ಸಿಐಡಿ ಪೋಲಿಸರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಕ್ರಿಕೆಟಿಗರು ಸೇರಿದಂತೆ ಹೂಡಿಕೆದಾರರ ಹಣವನ್ನು ಮರಳಿಸಲು ತಾನು ವಿಫಲಗೊಂಡಿದ್ದಾಗಿ ಝಲಾ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ವರದಿಗಳು ತಿಳಿಸಿವೆ.
ಝಲಾ ತಲೋದ್,ಹಿಮ್ಮತ್ನಗರ ಮತ್ತ ವಡೋದರಾ ಸೇರಿದಂತೆ ಗುಜರಾತಿನ ಹಲವಾರು ಜಿಲ್ಲೆಗಳಲ್ಲಿ ಕಚೇರಿಗಳನ್ನು ಆರಂಭಿಸಿದ್ದ ಮತ್ತು ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಲು ಏಜೆಂಟ್ರನ್ನು ನೇಮಿಸಿಕೊಂಡಿದ್ದ.
ಗಿಲ್ ಈ ಪೊಂಝಿ ಯೋಜನೆಯಲ್ಲಿ 1.95 ಕೋ.ರೂ.ಗಳ ಹೂಡಿಕೆ ಮಾಡಿದ್ದರೆ ಸುದರ್ಶನ, ತೆವಾಟಿಯಾ ಮತ್ತು ಶರ್ಮಾ ಕಡಿಮೆ ಮೊತ್ತಗಳನ್ನು ತೊಡಗಿಸಿದ್ದಾರೆ ಎನ್ನಲಾಗಿದೆ.
ಗಿಲ್ ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತೀಯ ತಂಡದ ಸದಸ್ಯರಾಗಿರುವುದರಿಂದ ನಂತರದ ದಿನಾಂಕದಲ್ಲಿ ಎಲ್ಲ ನಾಲ್ವರೂ ಕ್ರಿಕೆಟಿಗರಿಗೆ ಸಮನ್ಸ್ ಹೊರಡಿಸಲು ಪೋಲಿಸರು ಉದ್ದೇಶಿಸಿದ್ದಾರೆ.