ಉದ್ಧವ್ ಬಣದ ಸಂಪರ್ಕದಲ್ಲಿ ಶಿಂದೆ ಬಣದ 5-6 ಶಾಸಕರು: ವರದಿ

ಉದ್ಧವ್ ಠಾಕ್ರೆ , ಏಕನಾಥ್ ಶಿಂದೆ | PC : PTI
ಮುಂಬೈ: ಕನಿಷ್ಠ ಪಕ್ಷ ಐವರಿಂದ ಆರು ಮಂದಿ ಶಿವಸೇನೆ(ಏಕನಾಥ್ ಶಿಂದೆ ಬಣ)ಯ ಶಾಸಕರು ಶಿವಸೇನೆ(ಉದ್ಧವ್ ಠಾಕ್ರೆ ಬಣ)ಯ ಸಂಪರ್ಕದಲ್ಲಿದ್ದು, ಅವರು ಮತ್ತೆ ಪಕ್ಷಕ್ಕೆ ಮರಳಲು ಬಯಸಿದ್ದಾರೆ ಎಂದು ಶುಕ್ರವಾರ ಮೂಲಗಳು ತಿಳಿಸಿವೆ ಎಂದು indiatoday.in ವರದಿ ಮಾಡಿದೆ.
ಮಾತೃ ಪಕ್ಷಕ್ಕೆ ಮರಳಲು ಬಯಸಿರುವ ಶಾಸಕರ ಪಕ್ಷ ಸೇರ್ಪಡೆಯ ಕುರಿತು ಶಿವಸೇನೆ (ಉದ್ಧವ್ ಠಾಕ್ರೆ) ಮುಖ್ಯಸ್ಥ ಉದ್ಧವ್ ಠಾಕ್ರೆ ನಿರ್ಧರಿಸಲಿದ್ದಾರೆ ಎಂದೂ ವರದಿಯಾಗಿದೆ.
ಇದಕ್ಕೂ ಮುನ್ನ, ಗುರುವಾರದಂದು ಮಹಾರಾಷ್ಟ್ರದ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಬಣದ 10-15 ಮಂದಿ ಶಾಸಕರು ಶರದ್ ಪವಾರ್ ಪಾಳೆಯಕ್ಕೆ ಸೇರ್ಪಡೆಯಾಗಲು ಸಜ್ಜಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು India Today TV ವರದಿ ಮಾಡಿತ್ತು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇರುವಾಗ ಹಾಗೂ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಬಣವು ಕೇವಲ ಒಂದು ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿರುವಾಗ ಈ ಬೆಳವಣಿಗೆಗಳು ನಡೆದಿವೆ.