ಲೈಂಗಿಕ ಹಿಂಸೆಯ ಬಲಿಪಶು ಮಹಿಳೆಯರಿಗೆ 5 ಕೋಟಿ ರೂ. ಪರಿಹಾರ ವಿತರಣೆ
ಮಣಿಪುರ ಸರಕಾರದಿಂದ ಸುಪ್ರೀಂ ಕೋರ್ಟ್ ಗೆ ಮಾಹಿತಿ
ಸುಪ್ರೀಂ | Photo: PTI
ಹೊಸದಿಲ್ಲಿ: ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಸ್ಫೋಟಗೊಂಡಂದಿನಿಂದ ಲೈಂಗಿಕ ಹಿಂಸೆ ಮತ್ತು ಇತರ ಅಪರಾಧಗಳ ಬಲಿಪಶುವಾಗಿರುವ ಮಹಿಳೆಯರಿಗೆ ನೀಡುವುದಕ್ಕಾಗಿ 5 ಕೋಟಿ ರೂಪಾಯಿ ಮೊತ್ತವನ್ನು ಬಿಡುಗಡೆ ಮಾಡಿರುವುದಾಗಿ ರಾಜ್ಯ ಸರಕಾರವು ಸೋಮವಾರ ಸುಪ್ರೀಂ ಕೋರ್ಟಿಗೆ ತಿಳಿಸಿದೆ.
ಮಣಿಪುರದಲ್ಲಿ ಮೆತೈ ಮತ್ತು ಕುಕಿ ಜನಾಂಗೀಯರ ನಡುವೆ ಮೇ 3ರಂದು ಸಂಘರ್ಷ ಆರಂಭವಾಗಿದೆ.
ಆದರೆ, ಲೈಂಗಿಕ ಹಿಂಸೆ ಮತ್ತು ಅಪರಾಧಗಳ ಎಷ್ಟು ಪ್ರಕರಣಗಳು ದಾಖಲಾಗಿವೆ ಎನ್ನುವ ಮಾಹಿತಿಯನ್ನು ಅಫಿದಾವೆಟ್ ನಲ್ಲಿ ನೀಡಲಾಗಿಲ್ಲ.
ಕುಕಿ ಮತ್ತು ಮೆತೈ ಜನಾಂಗೀಯರ ನಡುವೆ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿದ ಹಲವು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಇವುಗಳಲ್ಲಿ, ಮೇ 4ರಂದು ಕಾಂಗ್ಪೊಕ್ಪಿ ಜಿಲ್ಲೆಯಲ್ಲಿ ಗುಂಪೊಂದು ನಡೆಸಿದ ಮೂವರು ಮಹಿಳೆಯರ ಬೆತ್ತಲೆ ಮೆರವಣಿಗೆಯ ಇಬ್ಬರು ಸಂತ್ರಸ್ತೆಯರು ಸಲ್ಲಿಸಿದ ಅರ್ಜಿಗಳೂ ಸೇರಿವೆ.
ಮೇ 4ರಂದು ಬಿ ಫೈನೊಮ್ ಗ್ರಾಮದಲ್ಲಿ ಮೂವರು ಕುಕಿ ಮಹಿಳೆಯರನ್ನು ದುಷ್ಕರ್ಮಿಗಳ ದೊಡ್ಡ ಗುಂಪೊಂದು ಬೆತ್ತಲೆ ಮೆರವಣಿಗೆ ಮಾಡಿತ್ತು. ಆ ಪೈಕಿ ಓರ್ವ ಮಹಿಳೆಯ ಮೇಲೆ ‘‘ಅಮಾನುಷ ಸಾಮೂಹಿಕ ಅತ್ಯಾಚಾರ’’ ಮಾಡಲಾಗಿದೆ ಎಂಬುದಾಗಿ ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.
ಆ ಘಟನೆಯ ವೀಡಿಯೊ ಜು. 19ರಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಮರುದಿನ, ಈ ಘಟನೆಯು ‘‘ಅಸ್ವೀಕಾರಾಹ’’ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು ಹಾಗೂ ಈ ವಿಷಯದಲ್ಲಿ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಕೇಂದ್ರ ಮತ್ತು ಮಣಿಪುರ ಸರಕಾರಗಳಿಗೆ ನಿರ್ದೇಶನ ನೀಡಿತ್ತು.
ಮೇ 3ರಿಂದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ 200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಮತ್ತು 60,000ಕ್ಕೂ ಅಧಿಕ ಮಂದಿ ಮನೆಗಳನ್ನು ತೊರೆದಿದ್ದಾರೆ.
5ರಿಂದ 10 ಲಕ್ಷ ರೂ. ಪರಿಹಾರ
ಸೆಪ್ಟಂಬರ್ ನಲ್ಲಿ, ಮಣಿಪುರ ಸರಕಾರವು ಸುಪ್ರೀಂ ಕೋರ್ಟ್ ನಿರ್ದೇಶನಗಳಂತೆ ಲೈಂಗಿಕ ಹಿಂಸೆ ಮತ್ತು ಇತರ ಅಪರಾಧಗಳ ಬಲಿಪಶು ಮಹಿಳೆಯರಿಗಾಗಿ ಪರಿಹಾರ ಯೋಜನೆಯೊಂದನ್ನು ರೂಪಿಸಿತು. ಕೊಲೆ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ 5ರಿಂದ 10 ಲಕ್ಷ ರೂ. ಪರಿಹಾರ ನೀಡಲು ನಿರ್ಧರಿಸಲಾಯಿತು. ಅತ್ಯಾಚಾರಕ್ಕೊಳಗಾದವರು ಮತ್ತು ಲೈಂಗಿಕ ಮತ್ತು ದೈಹಿಕ ಆಕ್ರಮಣಕ್ಕೆ ಒಳಗಾದವರು ಒಂದು ಲಕ್ಷದಿಂದ 9 ಲಕ್ಷ ರೂ. ವರೆಗೆ ಪರಿಹಾರ ಪಡೆಯಲಿದ್ದಾರೆ