ಬ್ರ್ಯಾಂಡೆಡ್ ಸಿರಿಧಾನ್ಯ ಹುಡಿಗೆ ಶೇ.5 ತೆರಿಗೆ: ಜಿಎಸ್ಟಿ ಮಂಡಳಿ ಸಭೆಯ ನಿರ್ಧಾರ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಮಿಶ್ರಣದಲ್ಲಿ ಕನಿಷ್ಠ ಶೇ.70ರಷ್ಟು ಸಿರಿಧಾನ್ಯಗಳೊಂದಿಗೆ ಹುಡಿಯ ರೂಪದಲ್ಲಿ ಸಿರಿಧಾನ್ಯಗಳ ಆಹಾರ ಉತ್ಪನ್ನಗಳನ್ನು ಪ್ಯಾಕ್ ಮಾಡದೆ ಅಥವಾ ಯಾವುದೇ ಬ್ರ್ಯಾಂಡ್ ಮತ್ತು ಲೇಬಲ್ ಇಲ್ಲದೆ ಪ್ಯಾಕ್ ನಲ್ಲಿ ಮಾರಾಟ ಮಾಡಿದರೆ ಶೂನ್ಯ ಜಿಎಸ್ಟಿ ದರವನ್ನು ಹಾಗೂ ಪೂರ್ವ ಪ್ಯಾಕ್ ಮಾಡಲಾಗಿದ್ದರೆ ಮತ್ತು ಲೇಬಲ್ ಹೊಂದಿದ್ದರೆ ಕೇವಲ ಶೇ.5ರಷ್ಟು ಜಿಎಸ್ಟಿಯನ್ನು ವಿಧಿಸಲು ಜಿಎಸ್ಟಿ ಮಂಡಳಿಯು ನಿರ್ಧರಿಸಿದೆ. ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ 52ನೇ ಮಂಡಳಿ ಸಭೆಯ ಬಳಿಕ ಈ ವಿಷಯವನ್ನು ಪ್ರಕಟಿಸಿದರು.
ಇಎನ್ಎ ಮೇಲೆ ತೆರಿಗೆಗೆ ರಾಜ್ಯಗಳಿಗೆ ಅಧಿಕಾರ
ಕಾನೂನಿನಂತೆ ರುಚಿ ಅಥವಾ ವಾಸನೆ ಇಲ್ಲದ ಮದ್ಯಸಾರದ ಶುದ್ಧ ರೂಪ ಎಕ್ಸ್ಟ್ರಾ-ನ್ಯೂಟ್ರಲ್ ಅಲ್ಕೋಹಾಲ್ (ಇಎನ್ಎ) ಮೇಲೆ ತೆರಿಗೆಯನ್ನು ವಿಧಿಸುವ ಹಕ್ಕನ್ನು ಜಿಎಸ್ಟಿ ಮಂಡಳಿಯು ಹೊಂದಿದೆಯಾದರೂ ಅದನ್ನು ರಾಜ್ಯಗಳಿಗೆ ನೀಡಲು ಮಂಡಳಿಯು ನಿರ್ಧರಿಸಿದೆ ಎಂದು ಸೀತಾರಾಮನ್ ಪ್ರಕಟಿಸಿದರು.
ಇಎನ್ಎ ಮೇಲೆ ತೆರಿಗೆಯನ್ನು ವಿಧಿಸಬೇಕೇ ಬೇಡವೇ ಎನ್ನುವುದು ಈಗ ರಾಜ್ಯಗಳಿಗೆ ಬಿಟ್ಟ ವಿಷಯವಾಗಿದೆ. ರಾಜ್ಯಗಳ ಹಿತಾಸಕ್ತಿಯ ದೃಷ್ಟಿಯಲ್ಲಿ ಜಿಎಸ್ಟಿ ಮಂಡಳಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದರು.
ಇಎನ್ಎ ಮೇಲೆ ತೆರಿಗೆ ವಿಧಿಸುವ ಅಧಿಕಾರ ರಾಜ್ಯಗಳಿಗೆ ಇಲ್ಲ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಈ ಹಿಂದೆ ತೀರ್ಪು ನೀಡಿತ್ತು.
‘ಕಾಕಂಬಿಯ ಮೇಲಿನ ಜಿಎಸ್ಟಿಯನ್ನು ಶೇ.28ರಿಂದ ಶೇ.5ಕ್ಕೆ ತಗ್ಗಿಸಲಾಗಿದ್ದು,ಇದರಿಂದ ಕಬ್ಬು ಬೆಳೆಗಾರರಿಗೆ ಲಾಭವಾಗಲಿದೆ ಮತ್ತು ಅವರು ಸಕ್ಕರೆ ಕಾರ್ಖಾನೆಗಳಿಂದ ಶೀಘ್ರ ಹಣವನ್ನು ಪಡೆಯಲು ಸಾಧ್ಯವಾಗುತ್ತದೆ. ಅಲ್ಲದೆ ಇದರಿಂದ ಜಾನುವಾರು ಮೇವು ವೆಚ್ಚವೂ ಕಡಿಮೆಯಾಗಲಿದೆ ಎಂದು ನಾವು ನಂಬಿದ್ದೇವೆ ’ ಎಂದು ಹೇಳಿದ ಸೀತಾರಾಮನ್,ಕೈಗಾರಿಕಾ ಬಳಕೆಗಾಗಿ ಇಎನ್ಎ ಅನ್ನು ಜಿಎಸ್ಟಿ ವ್ಯಾಪ್ತಿಯಡಿ ತರಲು ಜಿಎಸ್ಟಿ ದರ ಅಧಿಸೂಚನೆಯನ್ನು ತಿದ್ದುಪಡಿ ಮಾಡಲಾಗುವುದು ಮತ್ತು ಅದಕ್ಕೆ ಶೇ.18ರಷ್ಟು ಜಿಎಸ್ಟಿಯನ್ನು ವಿಧಿಸಲಾಗುವುದು ಎಂದು ತಿಳಿಸಿದರು.
ಮೇಲ್ಮನವಿ ನ್ಯಾಯಾಧಿಕರಣಗಳ ಅಧ್ಯಕ್ಷ ಮತ್ತು ಸದಸ್ಯರ ಗರಿಷ್ಠ ವಯೋಮಿತಿ ಹೆಚ್ಚಳ
ಜಿಎಸ್ಟಿ ಮೇಲ್ಮನವಿ ನ್ಯಾಯಾಧಿಕರಣಗಳ ಅಧ್ಯಕ್ಷ ಮತ್ತು ಸದಸ್ಯರ ಗರಿಷ್ಠ ವಯೋಮಿತಿಯನ್ನು ಹೆಚ್ಚಿಸಲು ಮಂಡಳಿಯು ನಿರ್ಧರಿಸಿದೆ ಎಂದು ಸೀತಾರಾಮನ್ ತಿಳಿಸಿದರು.
ಜಿಎಸ್ಟಿ ಮೇಲ್ಮನವಿ ನ್ಯಾಯಾಧಿಕರಣಗಳ ಅಧ್ಯಕ್ಷರ ಗರಿಷ್ಠ ವಯೋಮಿತಿಯನ್ನು ಈಗಿನ 67 ವರ್ಷಗಳಿಂದ 70 ವರ್ಷಕ್ಕೆ ಮತ್ತು ಸದಸ್ಯರ ಗರಿಷ್ಠ ವಯೋಮಿತಿಯನ್ನು 65ರಿಂದ 67 ವರ್ಷಗಳಿಗೆ ಹೆಚ್ಚಿಸಲಾಗಿದೆ. ನೇಮಕಾತಿಗೆ ಕನಿಷ್ಠ ವಯೋಮಿತಿಯನ್ನು ಈ ಹಿಂದೆ ನಿರ್ದಿಷ್ಟಗೊಳಿಸಿರಲಿಲ್ಲ,ಅದನ್ನೀಗ 50 ವರ್ಷಗಳೆಂದು ನಿಗದಿಗೊಳಿಸಲಾಗಿದೆ ಎಂದರು.
ನ್ಯಾಯಾಧಿಕರಣಗಳ ನ್ಯಾಯಾಂಗ ಸದಸ್ಯರಾಗಿರಲು ವಕೀಲರು ಕನಿಷ್ಠ 10 ವರ್ಷಗಳ ಅನುಭವವನ್ನು ಹೊಂದಿರಬೇಕು ಎಂದೂ ಸೀತಾರಾಮನ್ ಸ್ಪಷ್ಟಪಡಿಸಿದರು.