ಪ್ರಯಾಣಿಕನನ್ನು 50 ಕಿ.ಮೀ. ಹಿಂದೆ ಬಿಟ್ಟು ಚಲಿಸಿದ್ದ ಬಸ್: ರೂ. 2 ಲಕ್ಷ ಪರಿಹಾರ ಘೋಷಿಸಿದ ನ್ಯಾಯಾಲಯ
ಮುಂಬೈ: ಬಸ್ ಒಂದು 69 ವರ್ಷದ ಹಿರಿಯ ನಾಗರಿಕರೊಬ್ಬರನ್ನು ಅವರ ಇಳಿಯಬೇಕಿದ್ದ ಸ್ಥಳಕ್ಕಿಂತ 50 ಕಿಮೀ ಹಿಂದೆ ಬಿಟ್ಟು ತೆರಳಿದ್ದ ಕಾರಣಕ್ಕೆ ಅವರಿಗೆ ರೂ. 2 ಲಕ್ಷ ಪರಿಹಾರ ಮೊತ್ತ ನೀಡುವಂತೆ ಟ್ರಾವೆಲ್ ಏಜೆನ್ಸಿಯೊಂದಕ್ಕೆ ಗ್ರಾಹಕರ ಆಯೋಗವು ಸೂಚಿಸಿದೆ. ದೂರುದಾರರಿಗೆ ಮಾರ್ಗ ಬದಲಾವಣೆಯ ಕುರಿತು ಮುಂಚಿತವಾಗಿ ಮಾಹಿತಿ ನೀಡಿರಲಿಲ್ಲ ಹಾಗೂ ಪರ್ಯಾಯ ವ್ಯವಸ್ಥೆಯನ್ನು ಮಾಡಿರಲಿಲ್ಲ ಎಂಬ ಅಂಶವನ್ನು ಗಮನಕ್ಕೆ ತೆಗೆದುಕೊಂಡ ನ್ಯಾಯಾಲಯವು, ಟಿಕೆಟ್ ಗೆ ರೂ. 745 ಪಾವತಿಸಿದ್ದ 69 ವರ್ಷದ ಹಿರಿಯ ನಾಗರಿಕರಿಗೆ ಆಗಿರುವ ಅನನುಕೂಲ ಹಾಗೂ ತೊಂದರೆಯ ಕಾರಣಕ್ಕೆ ಅವರಿಗೆ ರೂ. 2 ಲಕ್ಷ ಪರಿಹಾರ ನೀಡಬೇಕೆಂದು ಟ್ರಾವೆಲ್ ಏಜೆನ್ಸಿಗೆ ಆದೇಶಿಸಿದೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಾಂಡಿವಿಲಿ ಜಿಲ್ಲೆಯ ನಿವಾಸಿ ಶೇಖರ್ ಹಟ್ಟಂಗಡಿ ಎಂಬ ದೂರುದಾರರು 2018ರಲ್ಲಿ ಸೂರತ್ ನಿಂದ ತಮ್ಮ ನಿವಾಸಕ್ಕೆ ಮರಳುವಾಗ, ಅವರು ಪ್ರಯಾಣಿಸುತ್ತಿದ್ದ ಬಸ್ ಅವರನ್ನು 50 ಕಿಮೀ ಹಿಂದೆಯೇ ಇಳಿಸಿ ಮುಂದೆ ಸಾಗಿತ್ತು. ಈ ಕುರಿತ ದೂರನ್ನು ವಿಚಾರಣೆ ನಡೆಸಿದ ಗ್ರಾಹಕರ ಆಯೋಗವು, “ದೂರುದಾರರು ಅವೇಳೆಯಲ್ಲಿ ದೂರದ ಸ್ಥಳವನ್ನು ತಮ್ಮ ಸ್ವಂತ ವ್ಯವಸ್ಥೆಯೊಂದಿಗೆ ಪ್ರಯಾಣಿಸುವಂತಾಗಿದೆ. ಇದರಿಂದ ಹಿರಿಯ ನಾಗರಿಕರೂ ಆದ ದೂರುದಾರರಿಗೆ ಮಾನಸಿಕ ಒತ್ತಡ ಹಾಗೂ ತೊಂದರೆ ಉಂಟಾಗಿದೆ. ಹೀಗಾಗಿ ದೂರುದಾರರು ಪರಿಹಾರಕ್ಕೆ ಅರ್ಹರಾಗಿದ್ದಾರೆ” ಎಂದು ಘೋಷಿಸಿದೆ.
ಈ ಪರಿಹಾರ ಮೊತ್ತವನ್ನು ಮಂತಿಸ್ ಟೆಕ್ನಾಲಜೀಸ್ ಪ್ರೈ ಲಿ., ಪೌಲೊ ಟ್ರಾವೆಲ್ಸ್ ಪ್ರೈ. ಲಿ. ಹಾಗೂ ಪೌಲೊ ಟ್ರಾವೆಲ್ಸ್ ನ ಸಿಇಒ ಮೈರೊನ್ ಪೆರೀರಾ ಪಾವತಿಸಬೇಕಿದೆ. ದೂರದಾರರಿಗೆ ಪ್ರಯಾಣ ವೆಚ್ಚ ಹಾಗೂ ನ್ಯಾಯಾಲಯದ ವೆಚ್ಚವಾಗಿ ರೂ. 2000 ಅನ್ನು ಹೆಚ್ಚುವರಿಯಾಗಿ ಪಾವತಿಸಬೇಕು ಎಂದೂ ಆಯೋಗವು ನಿರ್ದೇಶನ ನೀಡಿದೆ.
ಈ ಕುರಿತು ನವೆಂಬರ್ 12, 2021ರಂದು ಹಟ್ಟಂಗಡಿ ಅವರು ಮುಂಬೈ ಉಪನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗದ ಮೆಟ್ಟಿಲೇರಿದ್ದರು.
ಮುಂಬೈ-ಅಹದಾಬಾದ್ ಹೆದ್ದಾರಿಯ ರಿಪೇರಿ ಕಾಮಗಾರಿ ನಡೆಯುತ್ತಿರುವ ಕಾರಣ ನೀಡಿ ಮುಖ್ಯ ರಸ್ತೆಯಿಂದ ಮಾರ್ಗ ಬದಲಾವಣೆ ಮಾಡಿದ್ದ ಬಸ್ ಚಾಲಕ, ಸೂರತ್ ನಿಂದ ಪ್ರಯಾಣಿಸುತ್ತಿದ್ದ ಶೇಖರ್ ಹಟ್ಟಂಗಡಿಯನ್ನು ಥಾಣೆಗಿಂತಲೂ ದೂರದಲ್ಲಿ ಕೆಳಗಿಳಿಸಿ ಹೋಗಿದ್ದ. ಇದರಿಂದ ಅವರು ಅವೇಳೆಯಲ್ಲಿ 50 ಕಿಮೀ ದೂರ ಕ್ರಮಿಸಿ ತಮ್ಮ ನಿವಾಸವನ್ನು ತಲುಪುವಂತಾಗಿತ್ತು.