ಉತ್ತರಾಖಂಡದಲ್ಲಿ ಭಾರೀ ಮಳೆ, ಭೂಕುಸಿತ: ಪ್ರವಾಹದ ನಡುವೆ ಸಿಲುಕಿಕೊಂಡ 50 ಯಾತ್ರಾರ್ಥಿಗಳು
PC : indiatoday.in
ಡೆಹ್ರಾಡೂನ್: ಗುರುವಾರ ಸುರಿದ ಭಾರಿ ಮಳೆ ಹಾಗೂ ಚಾರಣ ಮಾರ್ಗದಲ್ಲಿ ಭೂಕುಸಿತ ಸಂಭವಿಸಿದ ಕಾರಣಕ್ಕೆ ಮದ್ ಮಹೇಶ್ವರ್ ದೇವಾಲಯಕ್ಕೆ ತೆರಳುತ್ತಿದ್ದ ಕನಿಷ್ಠ ಪಕ್ಷ 50 ಯಾತ್ರಾರ್ಥಿಗಳು ಮತ್ತು ಸ್ಥಳೀಯರು ದೇವಾಲಯದ ಬಳಿ ಪ್ರವಾಹದ ನಡುವೆ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮರ್ಕಂದ ನದಿಗೆ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಸೇತುವೆಯು ಕೊಚ್ಚಿಕೊಂಡು ಹೋಗಿದ್ದು, ದೇವಾಲಯದ ಯಾತ್ರೆಗೆ ತೊಡಕುಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರಾಖಂಡದ ಪಂಚ್ ಕೇದಾರ್ ದೇವಾಲಯಗಳ ಸಮೂಹಕ್ಕೆ ಸೇರಿರುವ ಈ ದೇವಾಲಯವು 11,473 ಅಡಿ ಎತ್ತರದಲ್ಲಿದೆ.
ಈ ನಡುವೆ, ಡೆಹ್ರಾಡೂನ್ ಹಾಗೂ ಬಾಗೇಶ್ವರ್ ಗೆ ಭಾರತೀಯ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಘೋಷಿಸಿದ್ದು, ಸಾಧಾರಣದಿಂದ ಭಾರಿ ಮಳೆಯಾಗಬಹುದು ಎಂದು ಮುನ್ಸೂಚನೆ ನೀಡಿದೆ.
ಈ ಮುನ್ಸೂಚನೆಯ ನಂತರ ಸ್ಥಳೀಯ ಜಿಲ್ಲಾಡಳಿತವು ಶುಕ್ರವಾರ (ಜು. 26) ಈ ಭಾಗದ ಎಲ್ಲ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಿದೆ.