ದೇಶದಲ್ಲಿ ಪ್ರತಿವರ್ಷ 50,000 ಜನರು ಹಾವು ಕಡಿತದಿಂದ ಸಾವು
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ದೇಶದಲ್ಲಿ ಪ್ರತಿವರ್ಷ ಸುಮಾರು 50,000 ಜನರು ಹಾವುಕಡಿತದಿಂದ ಸಾಯುತ್ತಿದ್ದಾರೆ,ಇದು ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಎಂದು ಬಿಜೆಪಿಯ ಸರನ್ (ಬಿಹಾರ) ಸಂಸದ ರಾಜೀವ ಪ್ರತಾಪ ರೂಡಿ ಸೋಮವಾರ ಹೇಳಿದರು.
ಲೋಕಸಭೆಯಲ್ಲಿ ಮಹತ್ವದ ವಿಷಯಗಳ ಕುರಿತು ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ರೂಡಿ,ದೇಶಾದ್ಯಂತ ಸುಮಾರು 30ರಿಂದ 40 ಲಕ್ಷ ಜನರು ಹಾವು ಕಡಿತಕ್ಕೆ ಒಳಗಾಗುತ್ತಾರೆ ಮತ್ತು 50,000 ಜನರು ಸಾಯುತ್ತಾರೆ. ಇದು ವಿಶ್ವದಲ್ಲಿಯೇ ಗರಿಷ್ಠವಾಗಿದೆ ಎಂದು ಹೇಳಿದರು.
ಹೆಚ್ಚಿನ ಸಾವುಗಳನ್ನು ತಡೆಯಬಹುದು. 28 ಡಿ.ಸೆ.ಗೂ ಹೆಚ್ಚಿನ ತಾಪಮಾನವಿದ್ದಾಗ ಹಾವು ಕಡಿತ ಘಟನೆಗಳು ಹೆಚ್ಚುತ್ತಿವೆ ಎಂದು ಹೇಳಿದ ಅವರು, ಹವಾಮಾನ ಬದಲಾವಣೆಯ ಪರಿಣಾಮವನ್ನು ಬೆಟ್ಟು ಮಾಡಿದರು.
ತನ್ನ ತವರು ರಾಜ್ಯ ಬಿಹಾರವು ಅತ್ಯಂತ ಬಡರಾಜ್ಯವಾಗಿದ್ದು, ಬಡತನದ ಜೊತೆಗೆ ನೈಸರ್ಗಿಕ ವಿಕೋಪಗಳನ್ನೂ ಎದುರಿಸುತ್ತಿದೆ ಎಂದೂ ಅವರು ಹೇಳಿದರು.
ಮಹಿಳೆಯರೇ ಹೆಚ್ಚಿರುವ ಬೀಡಿ ಕಾರ್ಮಿಕರ ಸಂಕಷ್ಟಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ವೆಲ್ಲೂರು ಸಂಸದ ಎಂ.ಕಾಥಿರ್ ಆನಂದ್ ಅವರು ಕೇಂದ್ರದ ಅಸಮರ್ಪಕ ಅನುದಾನವನ್ನು ಉಲ್ಲೇಖಿಸಿ, ಈ ಕಾರ್ಮಿಕರ ವೇತನಗಳನ್ನು ಹೆಚ್ಚಿಸುವಂತೆ ಆಗ್ರಹಿಸಿದರು.
ಬೀಡಿ ಕಾರ್ಮಿಕರು ಧೂಳು ಮತ್ತು ಇತರ ವೃತ್ತಿಪರ ಅಪಾಯಗಳಿಗೆ ಗಣನೀಯವಾಗಿ ಒಡ್ಡಿಕೊಳ್ಳುವುದರಿಂದ, 60 ವರ್ಷ್ಕಕಿಂತ ಮೇಲ್ಪಟ್ಟವರಿಗೆ ಪಿಂಚಣಿಯನ್ನು ನೀಡುವಂತೆಯೂ ಒತ್ತಾಯಿಸಿದರು.
ಕನ್ಯಾಕುಮಾರಿ ಸಂಸದ ವಿಜಯ ವಸಂತ ಅವರು,ಎಲ್ಲ ಚಿಕಿತ್ಸಾ ವೆಚ್ಚಗಳನ್ನು ಒಳಗೊಳ್ಳುವಂತೆ ಆಯುಷ್ಮಾನ ಭಾರತ ಯೋಜನೆಯ ಮರುಮೌಲ್ಯಮಾಪನಕ್ಕೆ ಆಗ್ರಹಿಸಿದರೆ,ತಮಿಳುನಾಡಿದ ಕರೂರು ಸಂಸದೆ ಎಸ್.ಜ್ಯೋತಿಮಣಿ ಅವರು,ನೀಟ್ ಪರೀಕ್ಷೆಯು ಸಾಮಾಜಿಕ ಆರ್ಥಿಕ ಅಸಮಾನತೆಗಳಿಗೆ ಕಾರಣವಾಗಿದೆ. ತಮಿಳುನಾಡಿನಲ್ಲಿ ಕನಿಷ್ಠ 18 ವಿದ್ಯಾರ್ಥಿಗಳು ನೀಟ್ನಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಬಾಂಗ್ಲಾದೇಶಿಗಳು ಆದಿವಾಸಿಗಳ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಇದನ್ನು ಪ್ರತಿಭಟಿಸಿದ್ದಕ್ಕಾಗಿ ಜಾರ್ಖಂಡ್ ಪೋಲಿಸರು ಅವರ ಹಾಸ್ಟೆಲ್ಗಳಿಗೆ ನುಗ್ಗಿ ಥಳಿಸಿದ್ದಾರೆ. ರಾಜ್ಯ ಸರಕಾರವು ಬಾಂಗ್ಲಾದೇಶಿಗಳನ್ನು ನೆಲೆಗೊಳಿಸುತ್ತಿದೆ ಎಂದು ಗೊಡ್ಡಾ ಸಂಸದ ನಿಶಿಕಾಂತ ದುಬೆ ಆರೋಪಿಸಿದರು.