ಅಮೆರಿಕದಿಂದ 519 ಮಂದಿ ಭಾರತೀಯ ಅಕ್ರಮ ವಲಸಿಗರ ಗಡೀಪಾರು: ಕೇಂದ್ರ ಸರ್ಕಾರ
ಸಾಂದರ್ಭಿಕ ಚಿತ್ರ PC: istockphoto.com
ಹೊಸದಿಲ್ಲಿ: ಅಮೆರಿಕದಿಂದ ಕಳೆದ ಒಂದು ವರ್ಷದಲ್ಲಿ ಅಕ್ರಮವಾಗಿ ವಾಸವಿದ್ದ 519 ಮಂದಿ ಭಾರತೀಯರನ್ನು ಗಡೀಪಾರು ಮಾಡಲಾಗಿದೆ ಎಂದು ಲೋಕಸಭೆಯಲ್ಲಿ ಶುಕ್ರವಾರ ಕೇಂದ್ರ ಸರ್ಕಾರ ಪ್ರಕಟಿಸಿದೆ. ಇವರನ್ನು ಅಕ್ರಮವಾಗಿ ವಾಸಿಸುತ್ತಿದ್ದಾರೆ ಎಂದು ಅಧಿಕಾರಿಗಳು ಘೋಷಿಸಿ ಗಡೀಪಾರಿಗೆ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದೆ.
ಅಮೆರಿಕದಿಂದ ಭಾರತೀಯರ ಗಡೀಪಾರಿಗೆ ಸಂಬಂಧಿಸಿದಂತೆ ಟಿಎಂಸಿ ಸದಸ್ಯೆ ಮಾಲಾರಾಯ್ ಕೇಳಿದ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವೆ ಕೀರ್ತಿ ವರ್ಧನ್ ಅಜಾದ್, "ಅಮೆರಿಕ ಸರ್ಕಾರದ ಅಂಕಿ ಅಂಶಗಳ ಪ್ರಕಾರ, 519 ಮಂದಿ ಭಾರತೀಯ ಪ್ರಜೆಗಳನ್ನು 2023ರ ನವೆಂಬರ್ನಿಂದ 2024ರ ಅಕ್ಟೋಬರ್ ಅವಧಿಯಲ್ಲಿ ಗಡೀಪಾರು ಮಾಡಲಾಗಿದೆ. ವಾಣಿಜ್ಯ ಹಾಗೂ ಚಾರ್ಟರ್ಡ್ ವಿಮಾನಗಳ ಮೂಲಕ ಅಮೆರಿಕ ಸರ್ಕಾರ ಗಡೀಪಾರು ಮಾಡಿದೆ" ಎಂದು ಸ್ಪಷ್ಟಪಡಿಸಿದರು.
ಕಳೆದ ಒಂದು ವರ್ಷದ ಅವಧಿಯಲ್ಲಿ ಅಮೆರಿಕ ಸರ್ಕಾರ ಗಡೀಪಾರು ಮಾಡಿದ ಭಾರತೀಯ ಪುರುಷರು ಮತ್ತು ಮಹಿಳೆಯರ ಸಂಖ್ಯೆಯ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಜತೆಗೆ ಅಮೆರಿಕದಿಂದ ಭಾರತೀಯರ ಗಡೀಪಾರಿಗೆ ಏನು ಕಾರಣ ಎಂದು ಪ್ರಶ್ನಿಸಲಾಗಿತ್ತು.
ಗಡೀಪಾರಿನ ಕಾರಣಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, "ಅಮೆರಿಕದ ಇಮಿಗ್ರೇಶನ್ ಮತ್ತು ಕಸ್ಟಮ್ಸ್ ನಿಯಮಗಳ ಜಾರಿ ವಿಭಾಗದ ಪ್ರಕಾರ, ಅಮೆರಿಕದಿಂದ ಗಡೀಪಾರು ಮಾಡಲ್ಪಟ್ಟ ಭಾರತೀಯರು ತೆರವು ಆದೇಶವನ್ನು ಪಡೆದಿದ್ದರು. ಅವರು ಅಮೆರಿಕದಲ್ಲಿ ಅನಧಿಕೃತವಾಗಿ ವಾಸವಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಲಾಗಿತ್ತು" ಎಂದು ವಿವರಿಸಿದರು.