ಭೋಪಾಲ್ | ಕಾಡಿನಲ್ಲಿದ್ದ ಇನ್ನೋವಾದಲ್ಲಿ 52 ಕೆಜಿ ಚಿನ್ನ, 10 ಕೋಟಿ ನಗದು ಪತ್ತೆ !
Photo | X/@ANI
ಭೋಪಾಲ್: ಆದಾಯ ತೆರಿಗೆ ಇಲಾಖೆ ಮತ್ತು ಲೋಕಾಯುಕ್ತ ಪೊಲೀಸರು ಭೋಪಾಲ್ ನಲ್ಲಿ ನಡೆಸಿದ ಪ್ರತ್ಯೇಕ ದಾಳಿಯಲ್ಲಿ ಕೋಟ್ಯಂತರ ಮೌಲ್ಯದ ಚಿನ್ನ ಮತ್ತು ನಗದನ್ನು ವಶಪಡಿಸಿಕೊಂಡಿದ್ದಾರೆ.
ಮೆಂಡೋರಿ ಅರಣ್ಯದಲ್ಲಿ ಇನ್ನೋವಾ ಕಾರೊಂದರಲ್ಲಿ 40 ಕೋಟಿಗೂ ಹೆಚ್ಚು ಮೌಲ್ಯದ 52 ಕೆಜಿ ಚಿನ್ನದ ಬಿಸ್ಕತ್ಗಳು ಮತ್ತು 10 ಕೋಟಿ ರೂ. ನಗದು ಪತ್ತೆಯಾಗಿದೆ.
ಅರಣ್ಯ ಮಾರ್ಗವಾಗಿ ಚಿನ್ನ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಕಾರೊಂದು ಪತ್ತೆಯಾಗಿದೆ. 100 ಮಂದಿ ಪೊಲೀಸರು ಮತ್ತು 30 ಪೊಲೀಸ್ ವಾಹನಗಳ ಮೂಲಕ ತಂಡವು ಕಾರನ್ನು ಸುತ್ತುವರಿದಿದೆ, ಆದರೆ ಕಾರಿನ ಒಳಗೆ ಹುಡುಕಾಟ ನಡೆಸಿದಾಗ , ಚಿನ್ನ ಮತ್ತು ನಗದನ್ನು ಹೊರತು ಪಡಿಸಿ ಯಾವುದೇ ವ್ಯಕ್ತಿಯು ಕಂಡುಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಕಾರು ಗ್ವಾಲಿಯರ್ ನಿವಾಸಿ ಚೇತನ್ ಗೌರ್ ಅವರಿಗೆ ಸೇರಿದ್ದು ಎಂದು ಹೇಳಲಾಗಿದೆ. ಇದೇ ವೇಳೆ ಭೋಪಾಲ್ ನ ಐಷಾರಾಮಿ ಅರೆರಾ ಕಾಲೋನಿಯಲ್ಲಿರುವ ಚೇತನ್ ಗೌರ್ ಅವರ ಗೆಳೆಯ ಪ್ರಾದೇಶಿಕ ಸಾರಿಗೆ ಕಚೇರಿಯ ಮಾಜಿ ಪೇದೆ ಸೌರಭ್ ಶರ್ಮಾ ಅವರ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಅಧಿಕಾರಿಗಳು ಒಂದು ಕೋಟಿಗೂ ಅಧಿಕ ಮೌಲ್ಯದ ನಗದು, ಭಾರೀ ಪ್ರಮಾಣದ ಚಿನ್ನ, ವಜ್ರಗಳು, ಬೆಳ್ಳಿಯನ್ನು ವಶ ಪಡಿಸಿಕೊಂಡಿದ್ದಾರೆ.