ಕಾರ್ಗಿಲ್ ನಲ್ಲಿ 5.2 ತೀವ್ರತೆಯ ಭೂಕಂಪನ; ಲಡಾಖ್, ಜಮ್ಮು & ಕಾಶ್ಮೀರದಲ್ಲೂ ಕಂಪನ

ಕಾರ್ಗಿಲ್: ಲಡಾಖ್ ನ ಕಾರ್ಗಿಲ್ ನಲ್ಲಿ ಶುಕ್ರವಾರ ನಸುಕಿನಲ್ಲಿ 5.2 ತೀವ್ರತೆಯ ಭೂಕಂಪ ಸಂಭವಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹಾಗೂ ಲಡಾಖ್ ನಲ್ಲಿ ಕೂಡಾ ಕಂಪನದ ಅನುಭವ ಆಗಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಪ್ರಕಟಿಸಿದೆ. ನಸುಕಿನ 2.50ರ ಸುಮಾರಿಗೆ 15 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ.
ಭೂಕಂಪ ವಲಯ-4ರಲ್ಲಿ ಸೇರುವ ಲೆಹ್ ಹಾಗೂ ಲಡಾಖ್, ಭೂಕಂಪಕ್ಕೆ ತುತ್ತಾಗುವ ಸಾಧ್ಯತೆಗಳು ಅತ್ಯಧಿಕ. ಆಯಕಟ್ಟಿನ ಸಕ್ರಿಯ ಹಿಮಾಲಯ ಪ್ರದೇಶದಲ್ಲಿ ಬರುವ ದೆಹಲ್ ಹಾಗೂ ಲಡಾಖ್ ನಲ್ಲಿ ನಿಯತವಾಗಿ ಭೂಕಂಪಗಳು ಸಂಭವಿಸುತ್ತಲೇ ಇರುತ್ತವೆ.
ಆಯಾ ಸ್ಥಳಗಳ ಟೆಕ್ಟಾನಿಕ್ ವ್ಯವಸ್ಥೆ ಮತ್ತು ಈ ಹಿಂದೆ ಸಂಭವಿಸಿದ ಭೂಕಂಪಗಳ ಆಧಾರದಲ್ಲಿ ವೈಜ್ಞಾನಿಕ ಮಾಹಿತಿಯನ್ನು ಆಧರಿಸಿ ದೇಶದ ಭೂಕಂಪಕ್ಕೆ ತುತ್ತಾಗುವ ಪ್ರದೇಶಗಳನ್ನು ಗುರುತಿಸಲಾಗುತ್ತದೆ.
ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್, ದೇಶವನ್ನು ನಾಲ್ಕು ಭೂಕಂಪ ವಲಯಗಳಾಗಿ ವರ್ಗೀಕರಿಸಿದ್ದು, ಈ ಪೈಕಿ 5ನೇ ವಲಯ ಅತ್ಯಧಿಕ ಭೂಕಂಪ ಅಪಾಯವನ್ನು ಎದುರಿಸುತ್ತದೆ. ಉಳಿದಂತೆ 4, 3 ಹಾಗೂ 2ನೇ ವಲಯಗಳಲ್ಲಿ ಭೂಕಂಪ ಸಾಧ್ಯತೆ ಅನುಕ್ರಮವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. 2ನೇ ವಲಯದಲ್ಲಿ ಭೂಕಂಪ ಸಾಧ್ಯತೆ ಅತ್ಯಂತ ಕಡಿಮೆ.