ದಿಲ್ಲಿಯಲ್ಲಿ 52.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿರುವ ಸಾಧ್ಯತೆಯಿಲ್ಲ, ಪರಿಶೀಲನೆಗೆ ಸೂಚಿಸಲಾಗಿದೆ: ಕೇಂದ್ರ ಸಚಿವ ರಿಜಿಜು
ಕಿರಣ್ ರಿಜಿಜು | PTI
ಹೊಸದಿಲ್ಲಿ: ರಾಜಧಾನಿ ದಿಲ್ಲಿಯಲ್ಲಿ ಸಾರ್ವಕಾಲಿಕ ಗರಿಷ್ಠ ತಾಪಮಾನ 52.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂಬ ಮಾಹಿತಿಯನ್ನು ನಗರದ ಹವಾಮಾನ ಸ್ಟೇಷನ್ಗಳು ವರದಿ ಮಾಡಿರುವ ಹಿನ್ನೆಲೆಯಲ್ಲಿ ಭೂವಿಜ್ಞಾನಗಳ ಸಚಿವ ಕಿರಣ್ ರಿಜಿಜು ಅವರು ಭಾರತದ ಹವಾಮಾನ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಈ ಅಂಕಿಅಂಶಗಳನ್ನು ಪರಿಶೀಲಿಸುವಂತೆ ಸೂಚನೆ ನೀಡಿದ್ದಾರೆ.
ಪ್ರಮುಖವಾಗಿ ಮುಂಗೇಶ್ಪುರ್ ಹವಾಮಾನ ಸ್ಟೇಷನ್ ಅಂಕಿಅಂಶಗಳ ಪರಿಶೀಲನೆಗೆ ಸಚಿವರು ಸೂಚಿಸಿದ್ದಾರೆ.
ದಿಲ್ಲಿಯಲ್ಲಿ 52.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಿಕೆ ಅಸಾಧ್ಯ. ಈ ವರದಿಯನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ. ಶೀಘ್ರ ಅಧಿಕೃತ ಮಾಹಿತಿ ಲಭ್ಯವಾಗಲಿದೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
ಮುಂಗೇಶ್ಪುರ್ ಹವಾಮಾನ ಸ್ಟೇಷನ್ ಬುಧವಾರ 52.3 ಡಿಗ್ರಿ ಸೆಲ್ಸಿಯಸ್ ದಾಖಲಿಸಿತ್ತು ಹಾಗೂ ಇದು ಭಾರತದಲ್ಲೇ ಗರಿಷ್ಠ ತಾಪಮಾನ ಎಂದು ಪರಿಗಣಿತವಾಗಿದೆ. ನಂತರ ಐಎಂಡಿಯ ನವೀಕೃತ ಬುಲೆಟಿನ್ನಲ್ಲಿ ತಾಪಮಾನ 52.9 ಡಿಗ್ರಿ ಸೆಲ್ಸಿಯೆಸ್ ಎಂದು ತಿಳಿಸಲಾಗಿತ್ತು.
“ಸೆನ್ಸರ್ ದೋಷ ಅಥವಾ ಇತರ ಕಾರಣಗಳಿಂದಾಗಿ ಇಷ್ಟೊಂದು ತಾಪಮಾನ ದಾಖಲಾಗಿರಬಹುದು. ರಾಜಧಾನಿಯ ಇತರ ಹವಾಮಾನ ಸ್ಟೇಷನ್ಗಳ ಅಂಕಿಅಂಶಗಳನ್ನು ಗಮನಿಸಿದಾಗ ಮುಂಗೇಶ್ಪುರ್ ಸ್ಟೇಷನ್ನಲ್ಲಿ ದಾಖಲಾದ ತಾಪಮಾನ ಅಸಹಜ ಅನಿಸುತ್ತದೆ, ಅಲ್ಲಿಗೆ ತಂಡ ಕಳುಹಿಸಲಾಗಿದೆ” ಎಂದು ಐಎಂಡಿ ಹೇಳಿದೆ.