ಕಳೆದ 20 ವರ್ಷಗಳಲ್ಲಿ ಮುಂಬೈನ ಲೋಕಲ್ ರೈಲು ಮಾರ್ಗಗಳಲ್ಲಿ 52,300 ಮಂದಿ ಸಾವು
ಸಾಂದರ್ಭಿಕ ಚಿತ್ರ (PTI)
ಮುಂಬೈ: ಕಳೆದ 20 ವರ್ಷಗಳಲ್ಲಿ ಮುಂಬೈನ ಉಪನಗರ ರೈಲು ಮಾರ್ಗಗಳಲ್ಲಿ 52,300ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಎಂದು ರೈಲ್ವೆ ಇಲಾಖೆಯು ಬುಧವಾರ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ ಉಪಾಧ್ಯಾಯ ನೇತೃತ್ವದ ಪೀಠವು ಮುಂಬೈ ಮಹಾನಗರದಲ್ಲಿ ಲೋಕಲ್ ರೈಲು ಪ್ರಯಾಣಿಕರು ಹೆಚ್ಚಿನ ಪ್ರಮಾಣದಲ್ಲಿ ಸಾವನ್ನಪ್ಪುತ್ತಿರುವುದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿದೆ.
ಅರ್ಜಿದಾರ ಯತಿನ್ ಜಾಧವ ಅವರು ಉಪನಗರ ರೈಲು ಮಾರ್ಗಗಳಲ್ಲಿ ಸಾವುಗಳಿಗೆ ಕಾರಣವಾಗುತ್ತಿರುವ ಹಲವಾರು ಸಮಸ್ಯೆಗಳನ್ನು ಬೆಟ್ಟು ಮಾಡಿದ್ದಾರೆ.
ಉಚ್ಚ ನ್ಯಾಯಾಲಯವು ಜೂನ್ನಲ್ಲಿ ನೀಡಿದ್ದ ನಿರ್ದೇಶನಗಳ ಮೇರೆಗೆ ಪಶ್ಚಿಮ ರೈಲ್ವೆ ಮತ್ತು ಮಧ್ಯ ರೈಲ್ವೆ ಮಂಗಳವಾರ ಮತ್ತು ಬುಧವಾರ ಅಫಿಡವಿಟ್ಗಳನ್ನು ಸಲ್ಲಿಸಿವೆ. ಈ ರೈಲ್ವೆ ವಲಯಗಳು ಮುಂಬೈ ಮಹಾನಗರ ಪ್ರದೇಶದಲ್ಲಿ ಲೋಕಲ್ ರೈಲುಗಳನ್ನು ನಿರ್ವಹಿಸುತ್ತಿವೆ.
2005 ಮತ್ತು ಜೂನ್ 2024ರ ನಡುವೆ ಪಶ್ಚಿಮ ರೈಲ್ವೆ ನಿರ್ವಹಿಸುತ್ತಿರುವ ಮಾರ್ಗಗಳಲ್ಲಿ 23,000ಕ್ಕೂ ಅಧಿಕ ಜನರು ಮೃತಪಟ್ಟಿದ್ದರೆ,2009 ಮತ್ತು ಜೂನ್ 2024ರ ನಡುವೆ ಮಧ್ಯ ರೈಲ್ವೆ ನಿರ್ವಹಿಸುತ್ತಿರುವ ಮಾರ್ಗಗಳಲ್ಲಿ 29,300ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಸಾವುಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಪಶ್ಚಿಮ ರೈಲ್ವೆ ನ್ಯಾಯಾಲಯಕ್ಕೆ ತಿಳಿಸಿದೆ. 2016ರಲ್ಲಿ 1,084 ಜನರು ಮೃತಪಟ್ಟು 1,517 ಜನರು ಗಾಯಗೊಂಡಿದ್ದರೆ 2023ರಲ್ಲಿ ಈ ಸಂಖ್ಯೆಗಳು ಅನುಕ್ರಮವಾಗಿ 936 ಮತ್ತು 984 ಆಗಿದ್ದವು.
ಸಾವುನೋವಿನ ಘಟನೆಗಳನ್ನು ತಡೆಯಲು ರೈಲ್ವೆ ಆಡಳಿತವು ಕಾಳಜಿಯನ್ನು ವಹಿಸುತ್ತಿದೆ, ಆದರೆ ಪ್ರಯಾಣಿಕರಿಂದ ಉತ್ತಮ ಸಹಕಾರ ಲಭಿಸುವವರೆಗೆ ಅದರ ಪ್ರಯತ್ನಗಳು ಫಲಪ್ರದವಾಗುವುದಿಲ್ಲ ಎಂದು ಪಶ್ಚಿಮ ರೈಲ್ವೆಯ ಹಿರಿಯ ವಿಭಾಗೀಯ ಭದ್ರತಾ ಆಯುಕ್ತ ಸಂತೋಷಕುಮಾರ ಸಿಂಗ್ ರಾಠೋಡ್ ಅಫಿಡವಿಟ್ನಲ್ಲಿ ತಿಳಿಸಿದ್ದಾರೆ.
ಶೇ.100ಕ್ಕಿಂತ ಹೆಚ್ಚಿನ ರೈಲು ಸಾಮರ್ಥ್ಯವನ್ನು ಈಗಾಗಲೇ ಬಳಸಲಾಗಿದೆ, ಹೀಗಾಗಿ ಯಾವುದೇ ಹೆಚ್ಚುವರಿ ರೈಲು ಸೇವೆಗಳನ್ನು ಆರಂಭಿಸಲು ಅವಕಾಶವಿಲ್ಲ ಎಂದೂ ತಿಳಿಸಲಾಗಿದೆ.
ಜನರು ನಿಯಮಬಾಹಿರವಾಗಿ ರೈಲು ಹಳಿಗಳಲ್ಲಿ ಓಡಾಡುವ ಸಮಸ್ಯೆ ಅತಿಯಾಗಿದೆ ಎಂದು ಮಧ್ಯ ರೈಲ್ವೆ ಅಫಿಡವಿಟ್ನಲ್ಲಿ ತಿಳಿಸಿದೆ.
ಕೊಳಗೇರಿಗಳು ರೈಲು ಹಳಿಗಳಿಗೆ ತುಂಬ ಹತ್ತಿರದಲ್ಲಿರುವುದರಿಂದ ಸಾವುಗಳ ಅಪಾಯ ಹೆಚ್ಚು ಎಂದು ಮಧ್ಯ ರೈಲ್ವೆಯ ಮುಂಬೈ ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ಮ್ಯಾನೇಜರ್ ಶಶಿಭೂಷಣ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಕಳೆದ 15 ವರ್ಷಗಳಲ್ಲಿ ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೆಚ್ಚಾಗಿದ್ದು,ಇದೇ ವೇಳೆ ಸಾವುಗಳ ಸಂಖ್ಯೆ ಕಡಿಮೆಯಾಗಿದೆ. 2009ರಲ್ಲಿ 1,782 ಜನರು ಮೃತಪಟ್ಟು 1,614 ಜನರು ಗಾಯಗೊಂಡಿದ್ದರೆ 2023ರಲ್ಲಿ ಈ ಸಂಖ್ಯೆಗಳು ಅನುಕ್ರಮವಾಗಿ 1,221 ಮತ್ತು 938 ಆಗಿವೆ ಎಂದು ಮಧ್ಯ ರೈಲ್ವೆಯು ತಿಳಿಸಿದೆ.