ದೇಶಾದ್ಯಂತ ವಿವಿಗಳಲ್ಲಿ 5,400 ಬೋಧಕ ಹುದ್ದೆಗಳು ಖಾಲಿ: ಕೇಂದ್ರ ಸರಕಾರ
“ ಅರ್ಧದಷ್ಟನ್ನು ಹುದ್ದೆಗಳನ್ನು ಮೀಸಲಿಡಲಾಗಿದೆ “

PC : deccanherald.com
ಹೊಸದಿಲ್ಲಿ: ದೇಶಾದ್ಯಂತ ಇರುವ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ 5,400ಕ್ಕೂ ಹೆಚ್ಚು ಬೋಧಕ ಹುದ್ದೆಗಳು ಖಾಲಿ ಇದ್ದು, ಈ ಪೈಕಿ ಅರ್ಧಕ್ಕಿಂತ ಹೆಚ್ಚು ಹುದ್ದೆಗಳನ್ನು ಇತರೆ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವರ್ಗಗಳಿಗೆ ಮೀಸಲಿರಿಸಲಾಗಿದೆ ಎಂದು ಬುಧವಾರ ರಾಜ್ಯಸಭೆಗೆ ಕೇಂದ್ರ ಸರಕಾರವು ಮಾಹಿತಿ ನೀಡಿದೆ.
ಈ ವಿಶ್ವವಿದ್ಯಾಲಯಗಳಲ್ಲಿ ವಿಶೇಷ ನೇಮಕಾತಿ ಅಭಿಯಾನದ ಮೂಲಕ 7,825ಕ್ಕಿಂತ ಹೆಚ್ಚು ಬೋಧಕ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ಕೇಂದ್ರ ಶಿಕ್ಷಣ ಖಾತೆಯ ರಾಜ್ಯ ಸಚಿವ ಸುಕಾಂತ ಮಜುಂದಾರ್ ತಿಳಿಸಿದರು.
ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಅವರು, ದೇಶಾದ್ಯಂತ ಇರುವ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಜನವರಿ 31, 2025ರವರೆಗೆ ಒಟ್ಟು 5,410 ಬೋಧಕ ಹುದ್ದೆಗಳು ಖಾಲಿ ಇವೆ. ಈ ಪೈಕಿ ಪರಿಶಿಷ್ಟ ಜಾತಿಯ 788 ಹುದ್ದೆಗಳು, ಪರಿಶಿಷ್ಟ ಪಂಗಡದ 472 ಹುದ್ದೆಗಳು ಹಾಗೂ ಇತರೆ ಹಿಂದುಳಿದ ವರ್ಗಗಳ 1,521 ಹುದ್ದೆಗಳು ಸೇರಿವೆ ಎಂದು ಹೇಳಿದರು.
“ಹುದ್ದೆಗಳು ಸೃಷ್ಟಿಯಾಗುವುದು ಹಾಗೂ ಅವುಗಳನ್ನು ಭರ್ತಿ ಮಾಡುವುದು ನಿರಂತರ ಪ್ರಕ್ರಿಯೆಯಾಗಿದೆ. ವೃದ್ಧಿಗೊಂಡ ವಿದ್ಯಾರ್ಥಿಗಳ ಸಾಮರ್ಥ್ಯದ ಹಿನ್ನೆಲೆಯಲ್ಲಿ, ನಿವೃತ್ತಿ, ರಾಜೀನಾಮೆ ಹಾಗೂ ಇನ್ನಿತರ ಅಗತ್ಯಗಳಿಂದ ಸೃಷ್ಟಿಯಾಗಿರುವ ಹುದ್ದೆಗಳನ್ನು ಭರ್ತಿ ಮಾಡುವ ಹೊಣೆಗಾರಿಕೆ ಕೇಂದ್ರೀಯ ವಿಶ್ವವಿದ್ಯಾಲಯಗಳದ್ದಾಗಿದೆ” ಎಂದು ಅವರು ತಿಳಿಸಿದರು.
ಶಿಕ್ಷಣ ಸಂಸ್ಥೆಗಳು ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯಗಳ ಮೇಲೆ ನಿರಂತರವಾಗಿ ನಿಗಾ ವಹಿಸಿರುವ ಕೇಂದ್ರ ಶಿಕ್ಷಣ ಸಚಿವಾಲಯ ಹಾಗೂ ವಿಶ್ವವಿದ್ಯಾಲಯ ಅನುದಾನ ಆಯೋಗವು, ನಿಯಮಿತವಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಅವುಗಳಿಗೆ ಸೂಚಿಸಿವೆ ಎಂದು ಸಚಿವ ಮಜೂಂದಾರ್ ಹೇಳಿದರು.