ದೃಷ್ಟಿ ಸಮಸ್ಯೆಯಿದ್ದರೂ ಭಾರತದ ಶೇ.55 ರಷ್ಟು ಚಾಲಕರು ವಾಹನ ಚಲಾಯಿಸುತ್ತಾರೆ: ವರದಿ

PC | PTI
ಹೊಸದಿಲ್ಲಿ: ಶೇ. 55.1ರಷ್ಟು ಭಾರತದಲ್ಲಿನ ಚಾಲಕರು ದೃಷ್ಟಿಯೊಂದಿಗೆ ರಾಜಿ ಮಾಡಿಕೊಂಡಿದ್ದು, ಶೇ. 53.3ರಷ್ಟು ಚಾಲಕರಿಗೆ ದೂರ ದೃಷ್ಟಿಯ ಚಿಕಿತ್ಸೆ ಬೇಕಿದ್ದರೆ, ಶೇ. 46.7ರಷ್ಟು ಚಾಲಕರಿಗೆ ಸಮೀಪ ದೃಷ್ಟಿ ಚಿಕಿತ್ಸೆಯ ಅಗತ್ಯವಿದೆ ಎಂದು ಮಂಗಳವಾರ ಬಿಡುಗಡೆಯಾಗಿರುವ ನೂತನ ವರದಿ ಬಹಿರಂಗಪಡಿಸಿದೆ.
ಐಐಟಿ ದಿಲ್ಲಿ ಸಿದ್ಧಪಡಿಸಿರುವ ಈ ವರದಿಯಲ್ಲಿ ಶೇ. 44.3ರಷ್ಟು ಚಾಲಕರು ಬಿಎಂಐ ಸೂಚ್ಯಂಕದ ಸಮೀಪ ಅಥವಾ ಅದಕ್ಕಿಂತ ಹೆಚ್ಚಿದ್ದಾರೆ ಎಂಬುದೂ ಬಯಲಾಗಿದೆ. ಶೇ. 57.4ರಷ್ಟು ಚಾಲಕರಿಗೆ ಅಧಿಕ ರಕ್ತದೊತ್ತಡವಿದ್ದರೆ, ಶೇ. 18.ರಷ್ಟು ಚಾಲಕರು ಮಧುಮೇಹಕ್ಕೆ ಆಸುಪಾಸು ಅಥವಾ ರಕ್ತದಲ್ಲಿ ಅಧಿಕ ಸಕ್ಕರೆ ಮಟ್ಟವನ್ನು ಹೊಂದಿದ್ದಾರೆ ಎಂದೂ ಹೇಳಲಾಗಿದೆ.
ಫೋರ್ ಸೈಟ್ ಫೌಂಡೇಶನ್ ಸಹಯೋಗದೊಂದಿಗೆ ಐಐಟಿ ದಿಲ್ಲಿಯು ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಒಟ್ಟು 50,000 ಮಂದಿ ಚಾಲಕರನ್ನು ಪರೀಕ್ಷೆಗೊಳಪಡಿಸಿದೆ.
ವರದಿಯ ಪ್ರಕಾರ, ಶೇ. 33.9ರಷ್ಟು ಚಾಲಕರು ಸಾಧಾರಣ ಮಾನಸಿಕ ಒತ್ತಡವಿದೆ ಎಂದು ವರದಿ ಮಾಡಿದ್ದರೆ, ಶೇ. 2.9ರಷ್ಟು ಚಾಲಕರು ಅಧಿಕ ಮಾನಸಿಕ ಒತ್ತಡ ಹೊಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಚಾಲರಿಗೆ ಮಾನಸಿಕ ಆರೋಗ್ಯದ ನೆರವಿನ ಅಗತ್ಯವು ಮುನ್ನೆಲೆಗೆ ಬಂದಿದೆ.
ಭಾರತದ ಸರಕು ಸಾಗಣೆ ವಲಯದ ಪಾಲಿಗೆ ಟ್ರಕ್ ಗಳು ಬೆನ್ನುಮೂಳೆಯಾಗಿದ್ದು, ಸರಕು ಸಾಗಣೆ ಸರಪಳಿಯನ್ನು ಸಂಪೂರ್ಣಗೊಳಿಸಲು ದೇಶಾದ್ಯಂತದ ಪ್ರಾಂತ್ಯಗಳನ್ನೆಲ್ಲ ಸಂಪರ್ಕಿಸಿ, ವಿವಿಧ ಸಾರಿಗೆ ರೂಪಗಳಿಗೆ ಸೇತುವೆಯಂತೆ ಕೆಲಸ ಮಾಡುತ್ತಿವೆ.
ಭಾರತದಲ್ಲಿನ ಟ್ರಕ್ ಚಾಲಕರು ಹಲವಾರು ಬಗೆಯ ಸವಾಲುಗಳು ಹಾಗೂ ಕ್ಲಿಷ್ಟಕರ ಜೀವನ ಶೈಲಿಯನ್ನು ಎದುರಿಸುತ್ತಿದ್ದಾರೆ. ದೀರ್ಘಕಾಲದ ಕೆಲಸದ ಅವಧಿ, ಅನಿಯಮಿತ ಪಾಳಿಗಳು, ಕುಟುಂಬಗಳಿಂದ ದೀರ್ಘಕಾಲ ದೂರ ಉಳಿಯುವಿಕೆ ಹಾಗೂ ಹಲವಾರು ಆರೋಗ್ಯ ಸಮಸ್ಯೆಗಳು ಈ ಪೈಕಿ ಸೇರಿವೆ.